ಧಾರವಾಡ: ಅಧಿಕಾರಿಗಳೆಂದರೆ ಅವರು ಅವರವರ ಕೆಲಸದಲ್ಲಿ ಬ್ಯುಸಿ ಇರ್ತಾರೆ. ಕೆಲಸದ ಅವಧಿ ನಂತರ ಸರಿಯಾದ ಸಮಯಕ್ಕೆ ಮನೆಗೆ ಹೋಗುತ್ತಾರೆ ಎಂಬ ಮಾತಿನ ಮಧ್ಯೆ ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಅಧಿಕಾರಿಗಳಿಬ್ಬರು ವಿಶಿಷ್ಟ ಕೆಲಸವೊಂದನ್ನು ಮಾಡಿ ಬೇಷ್ ಎನಿಸಿಕೊಂಡಿದ್ದಾರೆ.
ಈ ದೃಶ್ಯಗಳಲ್ಲಿ ನೀವು ನೋಡುತ್ತಿರುವ ದಂಪತಿ ಹೆಸರು ಯಶಪಾಲ್ ಕ್ಷೀರಸಾಗರ ಹಾಗೂ ಸೋನಲ್ ವೃಷ್ಣಿ. ಯಶಪಾಲ್ ಅವರು ಧಾರವಾಡ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ ಸೋನಲ್ ಧಾರವಾಡ ತಾಲೂಕಿನ ಗುಂಗರಗಟ್ಟಿ ಅರಣ್ಯ ಅಕಾಡೆಮಿ ಜಂಟಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರು ಒಂದೇ ಬ್ಯಾಚ್ ನವರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದಾರೆ.
ಸಸ್ಯ ಸಂಪತ್ತಿನ ಅರಿವಷ್ಟೇ ಅಲ್ಲದೇ ಅದರ ದಾಖಲೀಕರಣವೂ ಆಗಬೇಕು ಎನ್ನುವ ಉದ್ದೇಶದಿಂದ ಕಪ್ಪತ್ತಗುಡ್ಡದ ಸಸ್ಯಗಳನ್ನು ಇವರು ದಾಖಲೀಕರಣಗೊಳಿಸಿದ್ದಾರೆ. ಅರಣ್ಯದಲ್ಲಿನ ಬಗೆ ಬಗೆಯ ಸಂಪತ್ತು ಉಳಿಯಬೇಕು ಹಾಗೂ ಸಸ್ಯಗಳ ಮಾಹಿತಿ ನೀಡುವ ಧ್ಯೇಯದೊಂದಿಗೆ ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿನ ಔಷಧಿ ಸಸ್ಯಗಳನ್ನು ಇವರು ದಾಖಲೀಕರಣಗೊಳಿಸಿದ್ದಾರೆ.
ಕಪ್ಪತ್ತಗುಡ್ಡದ 375 ಔಷಧಿ ಸಸ್ಯಗಳ ಸಮಗ್ರ ಮಾಹಿತಿ ಸಂಗ್ರಹಿಸಿಕೊಂಡು ಕಪ್ಪತ್ತಗುಡ್ಡ (ಗದಗ ಔಷಧೀಯ ಸಸ್ಯಗಳ ಒಂದು ಸಂಗ್ರಹ) ಎಂಬ ಪುಸ್ತಕ ಬರೆದು ಸಿದ್ಧಪಡಿಸಿದ್ದಾರೆ. ಈ ಪುಸ್ತಕ ಔಷಧೀಯ ಸಸ್ಯಗಳ ಸಂತತಿ ಸೇರಿದಂತೆ ಅವುಗಳ ಕುರಿತು ಸಮಗ್ರ ಮಾಹಿತಿಯಿಂದ ಕೂಡಿದೆ.
ಐಎಫ್ಎಸ್ನ 2011 ನೇ ಬ್ಯಾಚ್ನ ಈ ದಂಪತಿ ಗದಗ ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಉಪ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಂದಿನ ಸಂದರ್ಭದಲ್ಲಿ ನಡೆದ ಆಂದೋಲನದಿಂದ ಸ್ಫೂರ್ತಿ ಪಡೆದುಕೊಂಡು ಔಷಧೀಯ ಸಸ್ಯಗಳ ಕುರಿತು ಅಧ್ಯಯನ ಮಾಡಿದ್ದಾರೆ. 2015 ರಿಂದ ಕಾರ್ಯ ಪ್ರವೃತ್ತರಾದ ದಂಪತಿ 6 ವರ್ಷಗಳ ಕಾಲ ಅಧ್ಯಯನ ಮಾಡಿ 428 ಪುಟಗಳ ಪುಸ್ತಕ ಹೊರತಂದಿದ್ದಾರೆ. ಈ ಪುಸ್ತಕ ಇದೇ ತಿಂಗಳ 24 ರಂದು ಬಿಡುಗಡೆಯಾಗುತ್ತಿದೆ. ವಿಶೇಷವೆಂದ್ರೆ, ಪುಸ್ತಕ ಮಾರಾಟ ಮಾಡದೇ ಜನರಿಗೆ ಉಚಿತವಾಗಿ ನೀಡಿ, ಔಷಧ ಸಸ್ಯಗಳ ಮಾಹಿತಿ ನೀಡುವುದೇ ಈ ದಂಪತಿಗಳ ಆಶಯವಾಗಿದೆ.
ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
23/01/2021 04:36 pm