ಹುಬ್ಬಳ್ಳಿ: ಉತ್ತಮ ಮಳೆ ಆಗಿದೆ ಅಂತ ರೈತರು ಖುಷಿಯಿಂದ ಇದ್ದರು. ಆದರೆ ಇತ್ತೀಚೆಗೆ ಸುರಿದ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅನಿರೀಕ್ಷಿತ ಮಳೆಯಿಂದ ಕಾಳು ಕಟ್ಟುವ ಹಂತದಲ್ಲಿ ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ 2.73 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಪೈಕಿ 89,148 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.
ಶಿರಗುಪ್ಪಿ, ನಲವಡಿ ಅತಿವೃಷ್ಠಿ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, 61,566 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಹಾನಿಯಾಗಿದೆ. 916 ಹೆಕ್ಟೇರ್ ಉದ್ದು ಹಾನಿಯಾಗಿದೆ. ಅಧಿಕಾರಿಗಳು ಸರ್ವೆ ರಿಪೋರ್ಟ್ ಸಿದ್ಧಪಡಿಸಿದ್ದಾರೆ. ಎನ್.ಡಿ.ಆರ್.ಎಫ್ ನಿಯಮಗಳ ಅನ್ವಯ ಪರಿಹಾರ ಕೊಡಲಾಗುವುದು.ರಾಜ್ಯ ಸರ್ಕಾರದ ನೆರವೂ ಸೇರಿ ಪ್ರತಿ ಹೆಕ್ಟೇರ್ ಗೆ 13,600 ಪರಿಹಾರ ನೀಡಲಾಗುವುದು ಎಂದರು.
ಬೆಳೆ ವಿಮೆ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗುವುದು 1,48,166 ರೈತರು ಬೆಳೆ ವಿಮೆ ಹಣ ಕಟ್ಟಿದ್ದಾರೆ. ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ವಿಮಾ ಕಂಪನಿಗಳ ಜೊತೆಯೂ ನಮ್ಮ ಅಧಿಕಾರಿಗಳು ಮಾತನಾಡಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
Kshetra Samachara
11/08/2022 01:36 pm