ವರದಿ-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಕಲಘಟಗಿ: ಅದು ಮಲೆನಾಡಿನ ಸೆರಗಿನಲ್ಲಿರುವ ಶಾಲೆ. ಆ ಶಾಲೆಯ ಅಂದವನ್ನು ನೋಡಿದರೇ ನಿಜಕ್ಕೂ ಮಲೆನಾಡಿನ ಸೊಬಗನ್ನು ಮೈ ತುಂಬಿಕೊಂಡಂತಿದೆ. ಆ ಜ್ಞಾನ ದೇಗುಲದ ವೈಶಿಷ್ಟ್ಯ ನೋಡಿದರೇ ಎಂತವರು ಕೂಡ ಕೈ ಮುಗಿದು ಒಳಗೆ ಬರಲೇ ಬೇಕು. ಹಾಗಿದ್ದರೇ ಯಾವುದು ಆ ಶಾಲೆ ಅಂತೀರಾ ಬನ್ನಿ ನೋಡಿಕೊಂಡು ಬರೋಣ ನಮ್ಮ ಧಾರವಾಡ ಜಿಲ್ಲೆಯ ಶಾಲೆಯೊಂದರ ವೈಭವವನ್ನು.
ಹೌದು.. ಹೀಗೆ ರಾಷ್ಟ್ರೀಯ ಚಿಹ್ನೆ, ಐಹೊಳೆ ದೇವಾಲಯ, ವಿಶ್ವವಿದ್ಯಾಲಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಜೋಗ ಜಲಪಾತ, ಹಂಪಿಯ ಕಲ್ಲಿನ ರಥ ಶಾಲೆಯ ಮಕ್ಕಳು ಪುಸ್ತಕದಲ್ಲಿರುವ ಪತ್ಯೇತರ ಚಟುವಟಿಕೆಗಳ ವಿವಿಧ ಚಿತ್ರಗಳಿಗೆ ಸಾಕ್ಷಿಯಾಗಿರುವುದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದ ಸರ್ಕಾರಿ ಶಾಲೆ. ಈ ಶಾಲೆಯ ಅಂದ ಹೆಚ್ಚಿಸಲು ನಾಲ್ಕು ಶಾಲೆಗಳ ಚಿತ್ರಕಲಾ ಶಿಕ್ಷಕರೊಂದಿಗೆ ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ಸದಸ್ಯರೂ ಕೈಜೋಡಿಸಿ ಸಾಕಾರಗೊಳಿಸಿದ ಪ್ರಯತ್ನ ಯಶಸ್ಸು ನೀಡಿದೆ. ಕಲಘಟಗಿ ತಾಲ್ಲೂಕಿನ ಮಲೆನಾಡು ಸೆರಗಿನ ಕೊನೆಯ ಗ್ರಾಮವಾದ ಬೆಂಡಲಗಟ್ಟಿಯಲ್ಲಿ ಶಿಕ್ಷಕರ ಹಾಗೂ ಗ್ರಾಮಸ್ಥರ ಸಹಕಾರದಿಂದ ಈ ಶಾಲೆಯ ವೈಭವ ಎದ್ದು ತೋರುತ್ತಿದೆ.
ಪಾಲಕರಲ್ಲಿ ಇತ್ತಿಚೆಗೆ ನಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿತರೇ ಜ್ಞಾನವಂತರಾಗುತ್ತಾರೆ ಎಂದುಕೊಂಡವರಿಗೆ ಸೂಕ್ತ ಉತ್ತರ ನೀಡುವ ರೀತಿಯಲ್ಲಿ ಶಿಕ್ಷಕರು ಹಾಗೂ ಗ್ರಾಮಸ್ಥರು ಇನ್ನಷ್ಟು ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ಶಾಲೆಯ ಅಂದ ಹೆಚ್ಚಿಸಲು ತೀರ್ಮಾನಿಸಿ ಇಂತಹದೊಂದು ಕಾರ್ಯವನ್ನು ಸಾಕಾರಗೊಳಿಸಿದ್ದಾರೆ. ಯಾವುದೇ ವಿಶ್ವವಿದ್ಯಾಲಯಕ್ಕೂ ಕಡಿಮೆ ಇಲ್ಲ ಎಂಬುವಂತ ರೀತಿಯಲ್ಲಿ ಈ ಶಾಲೆಯನ್ನು ವರ್ಣರಂಜಿತವಾಗಿ ಮಾಡಲಾಗಿದೆ. ಇನ್ನೂ ಸೌಂದರ್ಯ ವಂಚಿತವಾಗಿದ್ದ ಶಾಲೆ ನೋಡ ನೋಡುತ್ತಿದ್ದಂತೆ ಶಾಲೆಯ ಅಂದ ಬದಲಾಯಿತು. ಕಾಯಕಕ್ಕೆ ಹಗಲಿರುಳು ಕೈ ಜೋಡಿಸಿದವರು ತಾಲ್ಲೂಕಿನ ವಿವಿಧ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರಾದ ವಿಜಯಕುಮಾರ ಗಾಯಕವಾಡ, ಸಿಕಂದರ ಹೊಸಳ್ಳಿ, ಅರವಿಂದ ದಂಡಪ್ಪನವರ, ನಿಂಗಪ್ಪ ಕಂಬಾರ ಬಳಗದ ಕಲಾವಿದರು ಶಾಲೆಯ ಬಿಡುವಿನ ವೇಳೆಯಲ್ಲಿ ಶಾಲೆಯ ಸಂಪೂರ್ಣ ಸೌಂದರ್ಯಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಒಟ್ಟಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆಯೊಂದು ಜ್ಞಾನ ದೇಗುಲ ಮಾತ್ರವಾಗದೇ ಅದ್ಭುತ ಐತಿಹಾಸಿಕ ತಾಣದಂತೆ ಕಾಣುತ್ತಿರುವುದು ವಿಶೇಷವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/03/2022 07:43 pm