ಧಾರವಾಡ: ಮೂರ್ನಾಲ್ಕು ದಿನಗಳಿಂದ ಅಡ್ಡ ಮಳೆಗಳು ಸುರಿಯುತ್ತಿರುವುದರಿಂದ ಧಾರವಾಡ-ಸವದತ್ತಿ ಮಧ್ಯೆ ಇರುವ ಇನಾಂಹೊಂಗಲದ ತಾತ್ಕಾಲಿಕ ರಸ್ತೆ ತುಪ್ಪರಿ ಹಳ್ಳದ ನೀರಿನಿಂದ ತುಂಬಿ ಸಂಚಾರ ಬಂದ್ ಆಗಿದೆ.
ಇದರ ಮಧ್ಯೆ ಸಾರಿಗೆ ಸಂಸ್ಥೆಯ ಬಸ್ ಚಾಲಕನೋರ್ವ ನೀರಿನಲ್ಲಿ ಮುಳುಗಿದ ರಸ್ತೆಯಲ್ಲೇ ದಾಟಿ ಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಬಸ್ಸಿನ ಮುಂದಿನ ಚಕ್ರ ರಸ್ತೆ ಬಿಟ್ಟು ಕೆಳಗೆ ಇಳಿದ ಘಟನೆ ಬುಧವಾರ ನಡೆದಿದೆ.
ಕಳೆದ ವರ್ಷದ ಪ್ರವಾಹಕ್ಕೆ ಇನಾಂಹೊಂಗಲ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಈ ವರ್ಷ ಅದರ ಮರು ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿದೆ, ಅಲ್ಲಿಯವರೆಗೆ ಸೇತುವೆ ಪಕ್ಕವೇ ತಾತ್ಕಾಲಿಕ ರಸ್ತೆಯೊಂದನ್ನು ಮಾಡಲಾಗಿದ್ದು, ನಿರಂತರ ಮಳೆಗೆ ಆ ತಾತ್ಕಾಲಿಕ ರಸ್ತೆ ಕೂಡ ಕೊಚ್ಚಿಕೊಂಡು ಹೋಗಿದೆ.
ಅಲ್ಲದೇ ಈ ರಸ್ತೆ ನೀರಿನಿಂದ ತುಂಬಿಕೊಂಡು ರಸ್ತೆ ಎಲ್ಲಿದೆ ಎಂಬುದೇ ಗೊತ್ತಾಗುವುದಿಲ್ಲ. ಇದರ ಮಧ್ಯೆ ಈ ಬಸ್ ಚಾಲಕ ದಾಟಿ ಹೋಗಲು ಪ್ರಯತ್ನಿಸಿದ್ದಾನೆ. ಮುಂದಿನ ಒಂದು ಚಕ್ರ ರಸ್ತೆ ಬಿಟ್ಟು ಕೆಳಗೆ ಇಳಿದ ಕೂಡಲೇ ಜಾಗೃತಗೊಂಡ ಚಾಲಕ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ನಂತರ ಆ ಬಸ್ಸನ್ನು ಜೆಸಿಬಿ ಸಹಾಯದಿಂದ ಹಿಂದೆ ಜಗ್ಗಿಸಲಾಯಿತು.
ಮೊನ್ನೆ ಕೂಡ ಇದೇ ರೀತಿ ಬಸ್ ಚಾಲಕನೋರ್ವ ಹಳ್ಳದ ಮಧ್ಯೆಯೇ ಬಸ್ಸು ತೆಗೆದುಕೊಂಡು ಹೋಗಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
Kshetra Samachara
14/10/2020 06:25 pm