ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಮೊನ್ನೆ 22.30 ಲಕ್ಷ ಸುರಿದ್ರೂ ನಿರ್ವಹಣೆ ಕೊರತೆಯಿಂದ ಹಾಳಾದ ಕೆರೆಯಂಗಳದ ಅವ್ಯವಸ್ಥೆ ಆಯ್ತು ಬಳಿಕ ಹಾವು, ಚೇಳು ತುಂಬಿಕೊಂಡ ತೋರಣಗಟ್ಟಿ ಕೆರೆ ದುಸ್ಥಿತಿ ನೋಡಿದ್ರೀ ಈಗ ಇಲ್ಲೊಂದು ಐತಿಹಾಸಿಕ ಅಗಸಿಹೊಂಡ ಅಳವಿನಂಚಿಗೆ ಬಂದಿದೆ.
ಹೌದು ! ಕುಂದಗೋಳ ಪಟ್ಟಣದ ಕರೋಗಲ್ ಓಣಿಯಲ್ಲಿರುವ ಈ ಅಗಸಿಹೊಂಡ ನೋಡಿದ್ರೆ ನೀವು ಕ್ಷಣಕಾಲ ಮಂತ್ರಮುಗ್ದರಾಗಿ ಆ ಹೊಂಡದ ಬಗ್ಗೆ ವಿಚಾರಿಸದೆ ಇರಲು ಸಾಧ್ಯವೇ ಇಲ್ಲಾ. ಅಷ್ಟೋಂದು ಸೌಂದರ್ಯ ತುಂಬಿಕೊಂಡು ಸುತ್ತಲೂ ಬೆಳೆದ ತೆಂಗಿನ ಮರಗಳು ಸಾಲಿನ ಬಿಂಬಗಳ ನಡುವೆ ಹಕ್ಕಿ ಪಕ್ಷಿಗಳ ಆಗರವಾಗಿ ಪ್ರತಿ ವರ್ಷ ನಡೆಯುವ ತೆಪ್ಪದ ರಥೋತ್ಸವದ ಹಬ್ಬಕ್ಕೆ ಸಾಕ್ಷಿಯಾಗುತ್ತಿದ್ದ ಅಗಸಿಹೊಂಡ ಸದ್ಯ ಅನೈರ್ಮಲ್ಯದ ಗೂಡಾಗಿ ಅಳೆದು ಹೋಗ್ತಿದೆ.
ಬರೋಬ್ಬರಿ 3 ಎಕರೆ ವಿಸ್ತೀರ್ಣದಲ್ಲಿ ಪುರಾತನ ಕಾಲದಲ್ಲಿ ನಿರ್ಮಿತವಾದ ಅಗಸಿಹೊಂಡ ಒಂದು ಕಾಲದಲ್ಲಿ ಇಡೀ ಪಟ್ಟಣಕ್ಕೆ ಸಿಹಿ ನೀರಿನ ಮೂಲವಾಗಿದ್ದು ಸದ್ಯ ಕೊಳೆತ ಹಸಿರು ನೀರು ತುಂಬಿಕೊಂಡಿದೆ, ಕೆರೆಯ ಸುತ್ತ ನಿರ್ವಹಣೆ ಕಾಣದೆ ಆಳೆತ್ತರಕ್ಕೆ ಕಸ ಬೆಳೆದಿದ್ದು ವಿಸ್ತಾರವಾದ ಮೆಟ್ಟಿಲು ಹಾಳಾಗಿ ಕೆರೆಯಲ್ಲಿ ಪ್ಲಾಸ್ಟಿಕ್, ಪೂಜಾ ಸಾಮಗ್ರಿ, ಹಳೇ ಪೋಟೋ, ತೆಂಗಿನಕಾಯಿ ಬಿಸಾಡಿದ್ದರೆ, ಮಲ ಮೂತ್ರ ವಿಸರ್ಜನೆ ಜೊತೆಗೆ ಕುಡುಕರ ಹಾವಳಿ ಸಹ ಇದೆ, ಇನ್ನೂ ಕೆರೆಗೆ ಸುತ್ತಲೂ ನಿರ್ಮಾಣ ಮಾಡಿರುವ ಕಂಪೌಂಡ್ ಗೋಡೆಗಳು ಬೀಳುವ ಹಂತದಲ್ಲಿದ್ದು ಸ್ಥಳೀಯ ನಿವಾಸಿಗಳು, ಪುಟ್ಟ ಮಕ್ಕಳು ಯಾಮಾರಿದ್ರೇ ಹೊಂಡಕ್ಕೆ ಆಹುತಿಯಾಗೋದು ಗ್ಯಾರಂಟಿ.
ಈ ಬಗ್ಗೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮೌನ ತಾಳಿದ್ದು ಇತಿಹಾಸ ಸಾರುವ ಪಟ್ಟಣದ ಕೆರೆಯ ವಿನಾಶವನ್ನು ತಪ್ಪಿಸುವಂತೆ ಸ್ಥಳೀಯ ಜನ ಮನವಿ ಮಾಡಿದ್ದಾರೆ.
Kshetra Samachara
14/10/2020 12:49 pm