ಧಾರವಾಡ: ಅವರು ತೊಡೆ ತಟ್ಟಿ, ಸೆಡ್ಡು ಹೊಡೆದು ಕಾಲು ಕೆದರಿ ಕದನಕ್ಕೆ ನಿಂತರೆ ಅಲ್ಲಿದ್ದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿದ್ದರು. ಜಟ್ಟಿ ಮಲ್ಲರು ತಮ್ಮ ಎದುರಾಳಿಯನ್ನು ಪಟ್ಟು ಹಾಕಿ ಕೆಡವುತ್ತಿದ್ದ ದೃಶ್ಯ ಅಲ್ಲಿ ನಿಂತವರ ಮೈ ನವಿರೇಳಿಸುವಂತೆ ಮಾಡುತ್ತಿದ್ದವು. ಈ ಎಲ್ಲ ದೃಶ್ಯಗಳು ಕಂಡು ಬಂದದ್ದು ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದಲ್ಲಿ.
ಹೌದು! ಕಾರ್ಮಿಕರ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ಜೈ ಹನುಮಾನ್ ಕುಸ್ತಿ ಸಂಘದ ವತಿಯಿಂದ ಕಲ್ಲೂರು ಗ್ರಾಮದಲ್ಲಿ ಭಾರಿ ಜಂಗಿ ನಿಕಾಲಿ ಕುಸ್ತಿ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಶಾಲೆ ಮೈದಾನದಲ್ಲಿ ನಡೆದ ಕುಸ್ತಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಒಟ್ಟು 52 ಪುರುಷ ಕುಸ್ತಿ ಪಟುಗಳು, 5 ಜೋಡಿ ಮಹಿಳಾ ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ, ತಮ್ಮ ಶಕ್ತಿ ಸಾರ್ಮರ್ಥ್ಯವನ್ನು ಒರೆಗೆ ಹಚ್ಚಿದರು. ಮಹಿಳಾ ವಿಭಾಗದಲ್ಲಿ ಲೀನಾ ಸಿದ್ಧಿ, ಗೋಪವ್ವ ಕೊಡಕಿ, ಪುಷ್ಪ ನಾಯಕ ವಿಜೇತರಾದರು.
ಪುರುಷರ ವಿಭಾಗದಲ್ಲಿ ಮಹಾಂತೇಶ ದೊಡ್ಡವಾಡ, ಪರಶುರಾಮ ಬೊಮ್ಮನಹಳ್ಳಿ ನಡುವೆ ರೋಚಕ ಕುಸ್ತಿ ನಡೆಯಿತು. ಕೊನೆಗೆ ಅಂಕಗಳ ಆಧಾರದ ಮೇಲೆ ವಿಜೇತರಾದ ಪರಶುರಾಮ ಬೊಮ್ಮನಹಳ್ಳಿ ಅವರಿಗೆ ಬೆಳ್ಳಿ ಗದೆ ನೀಡಲಾಯಿತು.
ಮೈಮನ ನವಿರೇಳಿಸುವ ಕುಸ್ತಿಯನ್ನು ಕಣ್ಣು ತುಂಬಿಸಿಕೊಳ್ಳಲು ಧಾರವಾಡ ತಾಲೂಕಿನ ನಾನಾ ಭಾಗಗಳಿಂದ ಸಾವಿರಾರು ಕುಸ್ತಿ ಅಭಿಮಾನಿಗಳು ಆಗಮಿಸಿದ್ದರು. ಕುಸ್ತಿಪಟುಗಳು ಚಿತ್ ಪಟ್ ಆಗುವ ವೇಳೆಯಲ್ಲಿ ಸಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟಿದ್ದವು. ಕುಸ್ತಿಪಟುಗಳಿಗೆ ಕ್ರೀಡಾಭಿಮಾನಿಗಳು ಅತ್ಯುತ್ತಮ ಪ್ರೋತ್ಸಾಹ ನೀಡಿ ಹುರಿದುಂಬಿಸಿದರು.
ಇದಕ್ಕೂ ಮುನ್ನ ಕುಸ್ತಿ ಪಂದ್ಯಾವಳಿಯನ್ನು ಮನಗುಂಡಿಯ ಬಸವ ಮಹಾಮನೆಯ ಬಸವಾನಂದ ಮಹಾಸ್ವಾಮಿಗಳು, ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಅಂಜುಮನ್ ಇಸ್ಲಾಂ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಜೈ ಹನುಮಾನ್ ಕುಸ್ತಿ ಸಂಘದ ಅಧ್ಯಕ್ಷ ನಿಂಗರಾಜ ಹಡಪದ, ಬಿಜೆಪಿ ಮುಖಂಡ ಕಲಂದರ್ ಮುಲ್ಲಾ ಉದ್ಘಾಟಿಸಿದರು.
Kshetra Samachara
03/05/2022 03:13 pm