ಹುಬ್ಬಳ್ಳಿ: ಆಗಸ್ಟ್ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನ ಅದ್ಧೂರಿಯಾಗಿ ಆಚರಿಸುತ್ತಿದೆ. ಅಷ್ಟೇ ಅಲ್ಲ ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ "ಹರ್ ಘರ್ ತಿರಂಗಾ" ಅಭಿಯಾನಕ್ಕೆ ಕರೆ ನೀಡಿದೆ. ಹಾಗಿದ್ದರೆ ಈ ಹರ್ ಘರ್ ತಿರಂಗಾ ಯೋಜನೆ ರೂಪುಗೊಂಡಿದ್ದು ಎಲ್ಲಿಂದ...? ಅದರ ರೂವಾರಿ ಯಾರು ಅಂತೀರಾ..? ಈ ಸ್ಟೋರಿ ನೋಡಿ..
ದೇಶಾದ್ಯಂತ ಈಗ ಆಜಾದಿ ಕಾ ಅಮೃತ್ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ಕೇಂದ್ರ ಸರ್ಕಾರ ಆಗಸ್ಟ್ 13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿದ್ದು, ಇದಕ್ಕಾಗಿ ಎಲ್ಲೆಡೆ ಭರದ ಸಿದ್ಧತೆ ನಡೆದಿದೆ. ಆದ್ರೆ ಈ "ಹರ್ ಘರ್ ತಿರಂಗಾ" ಅಭಿಯಾನ ಪರಿಕಲ್ಪನೆ ಹುಟ್ಟಿಕೊಂಡಿದ್ದು ಕರ್ನಾಟಕದಿಂದಲೇ, ಅದು ಹುಬ್ಬಳ್ಳಿ ಮೂಲದ ಕನ್ನಡಿಗ ದೀಪಕ್ ಬೋಚಗೇರಿ ಏಳು ತಿಂಗಳ ಹಿಂದೆ ಹರ್ ಘರ್ ತಿರಂಗಾ ಅಭಿಯಾನ ನಡೆಸುವಂತೆ ಕೇಂದ್ರಕ್ಕೆ ಸಲಹೆ ನೀಡಿದ್ರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಪ್ರಧಾನ ಮಂತ್ರಿಗಳ ಕಚೇರಿಗೆ ಅಧಿಕೃತವಾಗಿ ಕಳೆದ ಜನರಿಯಲ್ಲಿ MY GOV IDEA BOX ನಲ್ಲಿ ವಿವರವಾದ ಸ್ಲೋಗನ್ ಗಳ ಜೊತೆ ಹರ್ ಘರ್ ತಿರಂಗಾ ಅಭಿಯಾನ ನಡೆಸುವಂತೆ ಸಲಹೆ ನೀಡಿದ್ದರು. 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಕುರಿತು ಮೋದಿಯವರು ಘೋಷಣೆ ಮಾಡಿದಾಗಲೇ ನಾನು ಏನಾದರೊಂದು ಹೊಸ ಸಲಹೆ ನೀಡಬೇಕು ಎಂಬ ಮನದಾಸೆ ಹೊಂದಿದ್ದ ದೀಪಕ್ ಕೇಂದ್ರಕ್ಕೆ "ಹರ್ ಘರ್ ತಿರಂಗಾ" ಅಭಿಯಾನ ನಡೆಸುವಂತೆ ಕೇಳಿದ್ರು.
ಸತತ 20 ವರ್ಷಗಳಿಂದ ತಮ್ಮ ಮನೆಯ ಮೇಲೆ ಧ್ವಜ ಹಾರಿಸುವ ದೀಪಕ್ ಗೆ ಇದು ಹವ್ಯಾಸವಾಗಿತ್ತು. ಹಾಗೇ ದೇಶದ ಪ್ರತಿಯೊಬ್ಬರ ಮನೆ ಮೇಲೆ ಧ್ವಜ ಹಾರಿಸಿದ್ರೆ ಹೇಗೆ ಎಂಬ ಕಲ್ಪನೆ ಮನದಲ್ಲಿ ಮೂಡಿದಾಗ ಕಳೆದ ಜನವರಿ 28 ರಂದು ಈ ಕುರಿತು ಕೇಂದ್ರ ಸರ್ಕಾರಕ್ಕೆ ಇ- ಮೇಲ್ ಮೂಲಕ ವಿವರವಾದ ಸಂದೇಶ ಕಳಿಸಿದ್ರು. ಕೇಂದ್ರ ಸರ್ಕಾರ ತಮ್ಮ ಸಲಹೆ ಸ್ವೀಕರಿಸಿದ ವಿಚಾರ ತೀರಾ ಇತ್ತೀಚಿಗೆ ತಿಳಿಯಿತು.
ಒಟ್ಟಾರೆ 75 ನೇ ಸ್ವಾತಂತ್ರ್ಯ ದಿನದ ಆಚರಣೆ ವಿಚಾರದಲ್ಲಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಸಲು ಇಡೀ ದೇಶವೇ ತುದಿಗಾಲ ಮೇಲೆ ನಿಂತಿರುವಾಗ, ಇಂತಹದೊಂದು ಕಲ್ಪನೆ ಕನ್ನಡ ನೆಲದಲ್ಲಿ ಹುಟ್ಟಿದ್ದು ಅನ್ನೋದು ಮತ್ತಷ್ಟು ಸಂತಸದ ವಿಚಾರ..
ಕ್ಯಾಮರಾಪರ್ಸನ್ ಇಷ್ಟಲಿಂಗ ಜೊತೆಗೆ ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/08/2022 01:32 pm