ಧಾರವಾಡ: ನಿವೇಶನ ಕೊಡುವುದಾಗಿ ಹೇಳಿ ಇಬ್ಬರು ವ್ಯಕ್ತಿಗಳಿಂದ ಮುಂಗಡ ಹಣ ಪಡೆದಿದ್ದ ಧಾರವಾಡದ ಟಾಪ್. ಒನ್ ಬಿಲ್ಡರ್ ಮತ್ತು ಡೆವಲಪರ್ಸ್ ಸಂಸ್ಥೆಯ ಮಾಲೀಕರು ಮುಂಬರುವ 8 ತಿಂಗಳೊಳಗಾಗಿ ನಿವೇಶನ ನೀಡಬೇಕು ಅಥವಾ ವಾರ್ಷಿಕ ಶೇ.8 ರ ಬಡ್ಡಿಯೊಂದಿಗೆ ಮುಂಗಡ ಹಣ ಹಾಗೂ ತಲಾ 50 ಸಾವಿರ ರೂಪಾಯಿ ಪರಿಹಾರದೊಂದಿಗೆ ಮರು ಪಾವತಿಸಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಅಮ್ಮಿನಭಾವಿ ಗ್ರಾಮದ ಸರ್ವೆ ನಂಬರ್ 1027/2 ಜಮೀನಿನಲ್ಲಿ ವಸತಿ ಉದ್ದೇಶಕ್ಕಾಗಿ ನಿವೇಶನ ಅಭಿವೃದ್ಧಿ ಪಡಿಸಿಕೊಡುವುದಾಗಿ ಟಾಪ್ ಒನ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಯವರು ಹಣ ಪಡೆದಿದ್ದರು. ಕೊಪ್ಪಳದ ಶ್ರೀನಿವಾಸ ತುಕಾರಾಮ ದಾಸರ್ ಹಾಗೂ ಗಂಗಾವತಿಯ ಶರಣಬಸವರಾಜ ಶಿವಪ್ಪ ಗದಗ ಅವರಿಂದ ತಲಾ 4.89 ಲಕ್ಷ ಮುಂಗಡ ಹಣವನ್ನು 2018ರ ಅಕ್ಟೋಬರ್ 22ರಂದು ಪಡೆದು ಖರೀದಿ ಪತ್ರ ಕೊಡಲಾಗಿತ್ತು. 6 ತಿಂಗಳೊಳಗಾಗಿ ನಿವೇಶನ ಅಭಿವೃದ್ಧಿಪಡಿಸಿ, ನೋಂದಾಯಿಸಿಕೊಡುವುದಾಗಿ ತಿಳಿಸಿದ್ದರು. ಆದರೆ, ಸಂಸ್ಥೆಯ ಮಾಲೀಕರಾದ ಶಾಂತಲಾ ಹಾಗೂ ಅನಿಲ ಬಾಗೇವಾಡಿ ಸುಮಾರು ಮೂರುವರೆ ವರ್ಷ ಗತಿಸಿದರೂ ನಿವೇಶನವನ್ನು ನೀಡದೇ ಮುಂಗಡವಾಗಿ ಪಡೆದಿದ್ದ ಹಣವನ್ನೂ ಕೂಡ ಹಿಂದಿರುಗಿಸದೇ ವಿಳಂಬ ಧೋರಣೆ ಅನುಸರಿಸಿದ್ದರು. ಇದರಿಂದ ಮನನೊಂದ ಗ್ರಾಹಕರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ಅಂತೆಯೇ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ 4 ಎಕರೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ನಿಯಮಾನುಸಾರ ಮುಂಬರುವ 8 ತಿಂಗಳೊಳಗೆ ಅಭಿವೃದ್ಧಿಪಡಿಸಿ ಇಬ್ಬರು ಗ್ರಾಹಕರಿಗೆ ಎರಡು ನಿವೇಶನಗಳನ್ನು ನೋಂದಾಯಿಸಿ ಕೊಡಬೇಕು. ವಿಫಲವಾದರೆ ಗ್ರಾಹಕರು ನೀಡಿದ ಮುಂಗಡ ಹಣವನ್ನು ವಾರ್ಷಿಕ ಶೇ.8ರ ಬಡ್ಡಿಯೊಂದಿಗೆ ಮರುಪಾವತಿಸಬೇಕು ಹಾಗೂ ತಲಾ 50 ಸಾವಿರ ರೂಪಾಯಿ ಪರಿಹಾರ ಒದಗಿಸಬೇಕೆಂದು ಸೂಚಿಸಿದ್ದಾರೆ. ಫಿರ್ಯಾದಿದಾರರ ಪರವಾಗಿ ನ್ಯಾಯವಾದಿ ಶ್ರೀದೇವಿ ಕೊಲ್ಹಾರ್ ವಾದ ಮಂಡಿಸಿದ್ದರು.
Kshetra Samachara
14/07/2022 10:04 pm