ಧಾರವಾಡ: ಕಾನೂನು ಸೇವೆಗಳ ಪ್ರಾಧಿಕಾರದ ರಚನೆ ಭಾರತೀಯ ನ್ಯಾಯಾಂಗದ ವಿಶೇಷತೆ ಆಗಿದೆ. ಪರಸ್ಪರ ನೆರವಿನಿಂದ ನೊಂದವರಿಗೆ ನ್ಯಾಯ ಕೊಡಲು ಸಾಧ್ಯ ಎಂದು ಧಾರವಾಡ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ ಅವರು ಹೇಳಿದರು.
ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತವಾಗಿ ಆಯೋಜಿಸಿದ್ದ ವಿವಿಧ ಇಲಾಖೆಗಳೊಂದಿಗಿನ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ವಿವಿಧ ಇಲಾಖೆಗಳ ಮೂಲಕ ಜನಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಆದರೆ ಅವು ಅರ್ಹರಿಗೆ ಮುಟ್ಟುವ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳು ಖಾತರಿ ಪಡಿಸಿಕೊಂಡು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಗಳು ವಿಸ್ತೃತ ರೂಪದಲ್ಲಿ ನಡೆಯುತ್ತಿವೆ. ನ್ಯಾಯಾಂಗವು ಪ್ರಾಧಿಕಾರದ ಮೂಲಕ ಸರ್ಕಾರಿ ಯೋಜನೆಗಳ ನಿಯಮಾನುಸಾರ ಅನುಷ್ಠಾನವಾದ ಬಗ್ಗೆ ಪರಿಶೀಲಿಸುತ್ತಿದೆ. ಅಧಿಕಾರಿಗಳು ಪರಸ್ಪರ ಕೈ ಜೋಡಿಸಿ, ಕೂಡಿ ಕೆಲಸ ಮಾಡಿದರೆ ಮಾತ್ರ ಸಂವಿಧಾನ, ಸರ್ಕಾರದ ಆಶಯ ಈಡೇರಿಸಲು ಸಾಧ್ಯವೆಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಉತ್ತಮವಾಗಿ ಕಾರ್ಯಗಳು ನಡೆಯುತ್ತಿವೆ. ಹಲವಾರು ಇಲಾಖೆಗಳು ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಸಿ.ಎಂ.ಪುಷ್ಪಲತ ಅವರ ಸಮರ್ಥ ಮಾರ್ಗದರ್ಶನದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ಪ್ಯಾನಲ್ ವಕೀಲರ ಮೂಲಕ ನೊಂದವರಿಗೆ, ಬಡವರಿಗೆ ಮತ್ತು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿದುಳಿದವರಿಗೆ ಉಚಿತವಾಗಿ ಕಾನೂನು ಅರಿವು ಮತ್ತು ನೆರವು ನೀಡಲು ಶ್ರಮಿಸುತ್ತಿದೆ. ಮನೆ ಮನೆಗೆ ಕಾನೂನು ಸೇವೆಗಳ ಪ್ರಾಧಿಕಾರ ತಲುಪಿಸಲು ಅರೆ ಕಾನೂನು ಸ್ವಯಂ ಸೇವಕರು ನಿತ್ಯ ಶ್ರಮಿಸುತ್ತಿದ್ದಾರೆ. ಜಿಲ್ಲೆ ಕಾನೂನು ಸಾಕ್ಷರ ಜಿಲ್ಲೆ ಆಗಲಿದೆ ಎಂದು ಉಮೇಶ ಅಡಿಗ ಅವರು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ನ್ಯಾಯಾಧೀಶ ಸದಾನಂದ ಸ್ವಾಮಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಂ ಸಂಜಯ ಎಸ್.ಗುಡಗುಡಿ, ಸುಪ್ರಭಾ ಅಡಿಗ, ಡಿಮಾನ್ಸ್ ನಿರ್ದೇಶಕ ಡಾ.ಮಹೇಶ ದೇಸಾಯಿ ಸೇರಿದಂತೆ ಇತರರು ಇದ್ದರು.
Kshetra Samachara
30/06/2022 06:21 pm