ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ ನೂತನ ರೈಲ್ವೆ ಮಾರ್ಗ ಯೋಜನೆಗೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ

ಧಾರವಾಡ: ಧಾರವಾಡ- ಬೆಳಗಾವಿ ನೂತನ ರೈಲ್ವೆ ಮಾರ್ಗದ ಯೋಜನೆಗೆ ಸಂಬಂಧಸಿದಂತೆ 2021ರ ಅಕ್ಟೋಬರ್ 16 ರಂದು ಹುಬ್ಬಳ್ಳಿಯಲ್ಲಿ ಸಂಸತ್ತಿನ ಸದಸ್ಯರು ತೆಗೆದುಕೊಂಡ ನಿರ್ಧಾರಕ್ಕೆ ಗುರುವಾರ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬೆಳಗಾವಿ ತಾಲೂಕಿನ ಕೆಕೆ ಕೊಪ್ಪ, ದೇಸೂರು ಗ್ರಾಮದ ವ್ಯಾಪ್ತಿಯಲ್ಲಿ ಧಾರವಾಡ-ಬೆಳಗಾವಿ ರೈಲು ಮಾರ್ಗ ಹಾದು ಹೋಗಲಿದೆ. ಇದಕ್ಕೆ ಸಾಕಷ್ಟು ಕೃಷಿ ಭೂಮಿ ಬಳಕೆಯಾಗಲಿದೆ. ಹೀಗಾಗಿ ಕೆಲ ಜನಪ್ರತಿನಿಧಿಗಳು, ರೈತ ಮುಖಂಡರು ಕೃಷಿ ಭೂಮಿ ಕೈ ಬಿಟ್ಟು ಪಕ್ಕದ ಸರ್ಕಾರಿ ಭೂಮಿ ಬಳಕೆಗೆ ಸಲಹೆ ನೀಡಿದ್ದರು. ಇದರಿಂದ ರೈಲು ಮಾರ್ಗದ 5 ರಿಂದ 6 ಕಿ.ಮೀ. ಅಂತರ ಕಡಿಮೆಯಾಗಲಿದೆ ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ್ದ ರೈಲ್ವೆ ಇಲಾಖೆ ಮರು ಸಮೀಕ್ಷೆ ಮಾಡಿತ್ತು. ಬಳಿಕ ಹುಬ್ಬಳ್ಳಿಯ ನೈಋತ್ಯ ರೈಲ್ವೆ ಇಲಾಖೆ ಕೇಂದ್ರ ಕಚೇರಿಯಲ್ಲಿ 2021ರ ಅಕ್ಟೋಬರ್ 16 ರಂದು ಜರುಗಿದ 9 ಜನ ಸಂಸತ್ತಿನ ಸದಸ್ಯರ ಸಭೆಯಲ್ಲಿ, ರೈತರು ಸೂಚಿಸಿದ ಮಾರ್ಗವನ್ನು ಬಿಟ್ಟು, ದೇಸೂರು ಮಾರ್ಗದಲ್ಲಿ ಕೃಷಿ ಭೂಮಿಯಲ್ಲಿಯೇ ಯೋಜನೆ ಪ್ರಾರಂಭಿಸಲು ಸಂಸತ್ತಿನ ಸದಸ್ಯರು, ರೈಲ್ವೆ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚಿಸಿದ್ದರು.

ಇದರಿಂದ ಕೃಷಿ ಭೂಮಿ ಕಳೆದುಕೊಳ್ಳುವ ದೇಸೂರು ಗ್ರಾಮದ ಪ್ರಸಾದ್ ಪಾಟೀಲ ಸೇರಿ 15 ಕ್ಕೂ ರೈತರು, ಹುಬ್ಬಳ್ಳಿಯಲ್ಲಿ ಸಂಸತ್ತಿನ 9 ಜನ ಸದಸ್ಯರು, ಧಾರವಾಡ- ಬೆಳಗಾವಿ ರೈಲ್ವೆ ನೂತನ ಮಾರ್ಗದ ನಿರ್ಮಾಣಕ್ಕೆ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರವೀಂದ್ರ ಗೋಕಾಕ ಅವರು, ಉದ್ದೇಶಿತ ಮಾರ್ಗವು ಗುರ್ಲಗುಂಜಿ, ದೇಸೂರು, ರಾಜಹಂಸಗಡ, ನಂದಿಹಳ್ಳಿ, ನಾಗೇನಹಟ್ಟಿ, ನಾಗೇನಹಾಳ, ಕೆಕೆ ಕೊಪ್ಪ ಮತ್ತು ಹಲಗಿಮರಡಿ ಗ್ರಾಮಗಳ ಮೂಲಕ ಹಾದುಹೋಗುತ್ತದೆ. ಈ ಮಾರ್ಗದಲ್ಲಿ ಸ್ವಾಧೀನಪಡಿಸಿಕೊಳ್ಳಬೇಕಾದ ಸುಮಾರು ಶೇ.80 ರಷ್ಟು ಕೃಷಿ ಭೂಮಿ ಫಲವತ್ತಾಗಿದೆ. ಜೊತೆಗೆ ಅಲ್ಲಿನ ನೂರಾರು ರೈತರು ಆ ಭೂಮಿಯನ್ನು ಅವಲಂಭಿಸಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿ ರೈಲ್ವೆ ನೂತನ ಮಾರ್ಗ ನಿರ್ಮಿಸಲು ಸಂಸತ್ತಿನ ಸದಸ್ಯರು ತೆಗೆದುಕೊಂಡ ನಿರ್ಧಾವನ್ನು ಅನೂರ್ಜಿತಗೊಳಿಸಬೇಕು ಎಂದು ನ್ಯಾಯಾಪೀಠಕ್ಕೆ ಮನವಿ ಮಾಡಿದರು.

ವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಟ್ಟು, ನೂತನ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ 2021ರ ಅ. 16 ರಂದು ಸಂಸತ್ತಿನ ಸದಸ್ಯರು ತೆಗೆದುಕೊಂಡ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ, ವಿಚಾರಣೆ ಮುಂದೂಡಿದೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/04/2022 06:06 pm

Cinque Terre

89.95 K

Cinque Terre

2

ಸಂಬಂಧಿತ ಸುದ್ದಿ