ಧಾರವಾಡ: ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆಯಾಗಿರುವುದರಿಂದ ಕೇಂದ್ರ ಕಾರಾಗೃಹ ಧಾರವಾಡದಲ್ಲಿನ ಬಂಧಿಗಳಿಗೆ ಮಾರ್ಚ್ 21 ರಿಂದ ಸಂಬಂಧಿಕರು ಹಾಗೂ ಇತರರ ಭೇಟಿಗೆ ಅವಕಾಶ ಕಲ್ಪಿಸಿ, ಸಂದರ್ಶನ(ನೇರ ಸಂದರ್ಶನ)ವನ್ನು ಪುನರಾರಂಭಿಸಲಾಗಿದೆ.
ಕೋವಿಡ್ ಮಾರ್ಗಸೂಚಿಗಳನ್ವಯ ಸಂದರ್ಶನವನ್ನು ಪುನರಾರಂಭಿಸಲಾಗುತ್ತಿದೆ. ಮುಂಜಾಗೃತ ಕ್ರಮವಾಗಿ, ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗಧಿತ ಸಂದರ್ಶನವನ್ನು ಮಾತ್ರ ನೀಡಲಾಗುವುದು. ಆದ್ದರಿಂದ ಬಂಧಿಗಳ ಸಂದರ್ಶನಕ್ಕೆ ಬರುವ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ವಕೀಲರು ಮುಂಚಿತವಾಗಿಯೇ ಕಾರಾಗೃಹದ ಸ್ಥಿರ ದೂರವಾಣಿ ಸಂಖ್ಯೆ: 0836-2447428, ಸಿ.ಯು.ಜಿ. ಮೊಬೈಲ್ ಸಂಖ್ಯೆ: 9480806480, ಕಾರಾಗೃಹದ ಇ-ಮೇಲ್ ವಿಳಾಸ: cpdintrview@gmail.com ಕ್ಕೆ ಸಂಪರ್ಕಿಸಿ ವಿವರಗಳೊಂದಿಗೆ ಸಂದರ್ಶನಕ್ಕೆ ನೋಂದಾಯಿಸಿ, ನಿಗದಿಪಡಿಸುವ ದಿನ ಮತ್ತು ಸಮಯಕ್ಕೆ ಆಗಮಿಸಬಹುದು.
ಸಂದರ್ಶನಕ್ಕೆ ಬರುವ ಸಂದರ್ಶಕರು ಯಾವುದೇ ರೀತಿಯ ಕೋವಿಡ್-19 ರೋಗ ಲಕ್ಷಣಗಳನ್ನು ಹೊಂದಿರಬಾರದು ಹಾಗೂ ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಂಡಿರುವ ಕುರಿತು ಲಸಿಕಾ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಸಂದರ್ಶಕರುಗಳು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಾರಾಗೃಹದ ಅಧೀಕ್ಷಕ ಎಂ. ಎ. ಮರಿಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
15/03/2022 03:23 pm