ಹುಬ್ಬಳ್ಳಿ: ನಗರದ ಪೊಲೀಸ್ ಠಾಣೆಯೊಂದರ ಇನ್ಸ್‌ಪೆಕ್ಟರ್ ತಮ್ಮ ಅಧೀನ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ರಾತ್ರಿ ಪಾಳೆಯ ಸಿಬ್ಬಂದಿಯು ಪಾಯಿಂಟ್ ಬುಕ್ ಪಂಚ್ ಮಾಡುವ ಕುರಿತು ಮಾಹಿತಿ ನೀಡಲೆಂದು ಠಾಣಾಧಿಕಾರಿಗೆ ಕರೆ ಮಾಡಿದ್ದ ಹೆಡ್ ಕಾನ್‌ಸ್ಟೆಬಲ್ ಒಬ್ಬರಿಗೆ, ಇನ್ಸ್‌ಪೆಕ್ಟರ್ ಒಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ರಿಪೋರ್ಟ್ ಹಾಕಿ ನಿನ್ನನ್ನು ಸಸ್ಪೆಂಡ್ ಮಾಡಿಸುತ್ತೇನೆಂದು ದರ್ಪದ ಮಾತನಾಡಿದ್ದಾರೆ. ತಂದೆ- ತಾಯಿಗೆ ಬೈದಿದ್ದಕ್ಕೆ ಬೇಸರಗೊಂಡ ಸಿಬ್ಬಂದಿ ತಮ್ಮ ವಾಟ್ಸಾಪ್ ಗ್ರೂಪ್‌ನಲ್ಲಿ ನೋವು ತೋಡಿಕೊಂಡಿದ್ದಾರೆ. ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದರೂ ಹೀಗೆ ಮಾಡಿದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ಠಾಣೆಯಲ್ಲಿ ಕೆಲ ಮಹಿಳಾ ಸಿಬ್ಬಂದಿಗೆ ಇನ್ಸ್‌ಪೆಕ್ಟರ್ ನಿರಂತರವಾಗಿ ರಾತ್ರಿ ಪಾಳೆ ಕರ್ತವ್ಯಕ್ಕೆ ನೇಮಿಸುತ್ತಿದ್ದಾರೆ. ಇದರಿಂದ ವಿಮುಕ್ತಿ ಬೇಕಾದರೆ ವೈಯಕ್ತಿಕವಾಗಿ ಭೇಟಿಯಾಗಿ ವಿನಂತಿಸಿಕೊಳ್ಳಬೇಕೆಂಬ ವಿಚಿತ್ರ ಬೇಡಿಕೆಯನ್ನೂ ಇಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ. ಇನ್ಸ್‌ಪೆಕ್ಟರ್ ಮೇಲಿನ ಆರೋಪದ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಲಾಭೂರಾಮ, ಈ ಸಂಬಂಧ ಪರಿಶೀಲಿಸಲು ಡಿಸಿಪಿ ಸಾಹಿಲ್ ಬಾಗ್ಲಾ ಅವರಿಗೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಡಿಸಿಪಿ ಸಾಹಿಲ್ ಬಾಗ್ಲಾ ಅವರು ಆ ಠಾಣೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಠಾಣಿಗೆ ಆಗಮಿಸಿದ್ದ ಡಿಸಿಪಿ ವೈಯಕ್ತಿಕವಾಗಿ ಸಿಬ್ಬಂದಿಯ ಸಮಸ್ಯೆ ಆಲಿಸಿದರು. ಮುಂದೆ ಹೀಗಾಗದಂತೆ ಇನ್ಸ್‌ಪೆಕ್ಟರ್‌ಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Kshetra Samachara
12/01/2022 12:48 pm