ಧಾರವಾಡ: ಅಪ್ರಾಪ್ತ ಬಾಲಕಿಗೆ ಮದುವೆ ಮಾಡಲು ಮುಂದಾಗಿದ್ದ ಪೋಷಕರಿಗೆ ಬುದ್ಧಿವಾದ ಹೇಳಿರುವ ಧಾರವಾಡ ಹೈಕೋರ್ಟ್, ಬಾಲಕಿಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗದಗನ ಬಾಲಕಿಯರ ಬಾಲ ಮಂದಿರಕ್ಕೆ ನಿರ್ದೇಶನ ನೀಡಿದೆ.
ಶಾಂತವ್ವ ಲಮಾಣಿ ಎಂಬುವವರು, ತಮ್ಮ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರು ತಮ್ಮ ಮಗಳನ್ನು ಪತ್ತೆ ಹಚ್ಚಿಕೊಡಲು ವಿಳಂಬ ಮಾಡುತ್ತಿದ್ದಾರೆ ಎಂದು ಶಾಂತವ್ವ ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಹೀಗಾಗಿ ಪೊಲೀಸರು ಸೂಕ್ತ ತನಿಖೆ ನಡೆಸಿ ಶಾಂತವ್ವ ಅವರ ಪುತ್ರಿಯನ್ನು ಪತ್ತೆ ಮಾಡಿ ಹೈಕೋರ್ಟ್ ವಿಭಾಗೀಯ ಪೀಠದ ಎದುರು ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯಕ್ಕೆ ಹಾಜರಾದ ಬಾಲಕಿ, ನಾನು ಅಪ್ರಾಪ್ತಳಾಗಿದ್ದು, ಪೋಷಕರು ನನ್ನ ಮದುವೆ ಮಾಡಲು ಬಯಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಸ್ವ ಇಚ್ಛೆಯಿಂದ ಗೋವಾಕ್ಕೆ ತೆರಳಿ ಅಲ್ಲಿ ನನ್ನ ಸಹೋದರನ ಜೊತೆಗಿದ್ದೆ. ನನಗೆ ಶಿಕ್ಷಣ ಮುಂದುವರೆಸುವ ಆಸೆ ಇದೆ. ಆದ್ದರಿಂದ ನನ್ನ ಪಾಲಕರೊಂದಿಗೆ ನನ್ನನ್ನು ಕಳುಹಿಸದೇ ಬಾಲ ಮಂದಿರಕ್ಕೆ ಕಳುಹಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಳು.
ಇದನ್ನು ಪರಿಗಣಿಸಿದ ಹೈಕೋರ್ಟ್, ಆಕೆಯ ಭದ್ರತೆ ಮತ್ತು ಕಲ್ಯಾಣದ ದೃಷ್ಟಿಯಿಂದ ಗದಗನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಕಳುಹಿಸುವಂತೆ ಪೊಲೀಸರಿಗೆ ಸೂಚಿಸಿತು. ಅಲ್ಲದೇ ಬಾಲಕಿಯು ಪ್ರೌಢಾವಸ್ಥೆ ತಲುಪುವವರೆಗೆ ಅಥವಾ ಆಕೆಯು ತನ್ನ ಪೋಷಕರ ಜೊತೆ ತೆರಳುವ ಮನಸ್ಸು ಮಾಡುವವರೆಗೆ ಆಕೆಯನ್ನು ಬಾಲ ಮಂದಿರದಲ್ಲೇ ಇಟ್ಟುಕೊಳ್ಳಬೇಕು ಜೊತೆಗೆ ಆಕೆ ಶಿಕ್ಷಣ ಮುಂದವರೆಸುವ ಬಗ್ಗೆ ಖಾತ್ರಿಪಡಿಸುವಂತೆ ಬಾಲಮಂದಿರಕ್ಕೆ ಹೈಕೋರ್ಟ್ ಸೂಚಿಸಿದೆ.
ಒಂದು ವೇಳೆ ಬಾಲಕಿಯು ತಮ್ಮ ಪೋಷಕರ ಜೊತೆ ತೆರಳಲು ಬಯಸಿದರೆ ಆಕೆಯ ರಕ್ಷಣೆ ಮತ್ತು ಭವಿಷ್ಯದ ಖಾತ್ರಿ ಪಡೆದು ಆಕೆಯನ್ನು ಪೋಷಕರ ಜೊತೆ ಕಳುಹಿಸಬಹುದು ಎಂದು ಹೈಕೋರ್ಟ್ ನಿರ್ದೇಶಿಸಿದೆ.
Kshetra Samachara
30/11/2021 12:15 pm