ಹುಬ್ಬಳ್ಳಿ: ರಸ್ತೆ ಅಪಘಾತಗಳನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. 5 ಲಕ್ಷದಷ್ಟು ಜನರು ಅಂಗಾಗಗಳನ್ನು ಕಳೆದುಕೊಂಡು ಊನರಾಗುತ್ತಿದ್ದಾರೆ ಎಂದು ಧಾರವಾಡ ಸಾರಿಗೆ ಉಪ ಆಯುಕ್ತ ಮಾರುತಿ ಸಂಬ್ರಾಣಿ ಕಳವಳ ವ್ಯಕ್ತಪಡಿಸಿದರು.
ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಆಯೋಜಿಸಲಾದ ಬೀದಿ ನಾಟಕಕ್ಕೆ ಡೋಲಕ್ಕ ಭಾರಿಸುವುದರ ಮೂಲಕ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ರಸ್ತೆ ಅಪಘಾತಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ರಸ್ತೆ ಸುರಕ್ಷತೆ ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ. ಚಾಲಕರು ಸಾವಧಾನವಾಗಿ ವಾಹನ ಚಲಾಯಿಸಬೇಕು. ಸಾರಿಗೆ ನಿಯಮಗಳನ್ನು ಪಾಲಿಸಬೇಕು ಎಂದರು.
ಹರ್ಲಾಪುರದ ಚಂದ್ರಶೇಖರ ಕಾಳೆ ನೇತೃತ್ವದ ಸಿ.ವಾಯ್.ಸಿ.ಡಿ ಕಲಾತಂಡ ರಸ್ತೆ ಸುರಕ್ಷತೆ ಕುರಿತು ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ವಾಹನ ಚಾಲಕರು ಹಾಗೂ ಸಾರ್ವಜನಿಕರಿಗೆ "ರಸ್ತೆ ಸುರಕ್ಷೆ-ಜೀವದ ರಕ್ಷೆ" ಧ್ಯೇಯವಾಕ್ಯದ ಕರಪತ್ರಗಳನ್ನು ಹಂಚಲಾಯಿತು.
ನಂತರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾಡಾಳಿತ, ಸಾರಿಗೆ, ಪೊಲೀಸ್ ಇಲಾಖೆ ಹಾಗೂ ವಿವಿಧ ಮೋಟಾರು ಡ್ರೈವಿಂಗ್ ಸ್ಕೂಲ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಮೋಟಾರು ಕಾರ್ ರ್ಯಾಲಿಗೆ ಹಸಿರು ನಿಶಾನೆ ತೋರಿಸಿವುದರ ಮೂಲಕ ಚಾಲನೆ ನೀಡಲಾಯಿತು. ಕಾರ್ ರ್ಯಾಲಿ ಈದ್ಗಾ ಮೈದಾನ, ಚೆನ್ನಮ್ಮಾ ವೃತ್ತ, ನ್ಯೂ ಇಂಗ್ಲೀಷ್ ಸ್ಕೂಲ್, ಬಂಕಾಪುರ ಚೌಕ್, ಬಿಡ್ನಾಳ ಕ್ರಾಸ್ ಮೂಲಕ ಗಬ್ಬೂರ ಬೈಪಾಸ್ ಪ್ರಾದೇಶಿಕ ಸಾರಿಗೆ ಕಚೇರಿ ತಲುಪಿತು.
Kshetra Samachara
12/02/2021 01:36 pm