ಧಾರವಾಡ: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಅಣ್ಣನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ ತಮ್ಮ ಹಾಗೂ ಆತನ ಇನ್ನೋರ್ವ ಸಹಚರನಿಗೆ ಧಾರವಾಡದ ಎರಡನೇ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯ 10 ಸಾವಿರ ರೂಪಾಯಿ ದಂಡ ವಿಧಿಸುವುದರ ಜೊತೆಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಈರಪ್ಪ ಮಡಿವಾಳಪ್ಪ ದೇಶಣ್ಣವರ ಹಾಗೂ ಶೇಖಪ್ಪ ಮಡಿವಾಳಪ್ಪ ದೇಶಣ್ಣವರ ಅವರ ಮಧ್ಯೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ಸಂಭವಿಸಿತ್ತು. 2015 ರ ಡಿಸೆಂಬರ್ 31 ರಂದು ಈರಪ್ಪ ಮಡಿವಾಳಪ್ಪ ದೇಶಣ್ಣವರ ಕಸಬಾ ಓಣಿಯಲ್ಲಿ ಹಾಯ್ದು ಹೋಗುತ್ತಿದ್ದ ಸಂದರ್ಭದಲ್ಲಿ ತಮ್ಮ ಶೇಖಪ್ಪ ಮಡಿವಾಳಪ್ಪ ದೇಶಣ್ಣವರ ಹಾಗೂ ಈರಪ್ಪ ಶೇಖಪ್ಪ ದೇಶಣ್ಣವರ ಇಬ್ಬರೂ ಸೇರಿಕೊಂಡು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದರು.
ಈ ಸಂಬಂಧ ಅಂದಿನ ಗ್ರಾಮಾಂತರ ವ್ಯಾಪ್ತಿಯ ಸಿಪಿಐ ಮೋತಿಲಾಲ್ ಪವಾರ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರೂ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯ ಜೊತೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
Kshetra Samachara
20/01/2021 09:07 pm