ಧಾರವಾಡ: ಮೊಹರಂ ಹಬ್ಬದ ಡೋಲಿಗಳನ್ನು ಇಡುತ್ತಿದ್ದ ಶೆಡ್ ಮಳೆಗೆ ಬಿದ್ದ ಪರಿಣಾಮ ಡೋಲಿಯನ್ನು ಗ್ರಾಮ ಪಂಚಾಯ್ತಿಗೆ ತಂದಿಟ್ಟ ಪರಿಣಾಮ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದಿದೆ.
ಮೊಹರಂ ಆಚರಣೆಗಾಗಿ ಮಾಡಿಸಿದ್ದ ಡೋಲಿಯನ್ನು ಗ್ರಾಮ ಪಂಚಾಯ್ತಿಗೆ ಸೇರಿದ ಜಾಗವೊಂದರಲ್ಲಿ ಶೆಡ್ ಹಾಕಿ ಇಡಲಾಗಿತ್ತು. ಆದರೆ ಕಳೆದ ಎರಡು ದಿನಗಳ ಹಿಂದೆ ಸುರಿದ ಗಾಳಿ, ಮಳೆಗೆ ಶೆಡ್ ಕುಸಿದು ಬಿದ್ದಿದೆ. ಹೀಗಾಗಿ ಡೋಲಿ ಮಳೆಯಲ್ಲಿಡುವುದು ಸರಿಯಲ್ಲ ಎಂದು ಸ್ಥಳೀಯ ಕೆಲವರು ಡೋಲಿಯನ್ನು ತಂದು ಗ್ರಾಮ ಪಂಚಾಯ್ತಿ ಕಟ್ಟೆಯ ಮೇಲಿಟ್ಟಿದ್ದಾರೆ. ಇದಕ್ಕೆ ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದರು. ಅಲ್ಲದೇ ಪುನಃ ಅದೇ ಜಾಗದಲ್ಲಿ ಡೋಲಿ ಇಡಲು ಶಾಶ್ವತ ವ್ಯವಸ್ಥೆ ಮಾಡುವಂತೆ ಕೆಲವರು ಆಗ್ರಹಿಸಿದ್ದರು. ಜೊತೆಗೆ ಇಷ್ಟು ದಿನ ಡೋಲಿ ಇಡುತ್ತಿದ್ದ ಗ್ರಾಮ ಪಂಚಾಯ್ತಿ ಜಾಗದ ಪಕ್ಕದಲ್ಲೇ ಖಾಸಗಿ ಜಾಗವೂ ಇದ್ದು, ಅದಕ್ಕೆ ಸಂಬಂಧಿಸಿದಂತೆ ವ್ಯಾಜ್ಯವೂ ನಡೆಯುತ್ತಿದೆ. ಹೀಗಾಗಿ ಪುನಃ ಅದೇ ಸ್ಥಳದಲ್ಲಿ ಡೋಲಿ ಇಡಲು ಶಾಶ್ವತವಾಗಿ ಜಾಗ ಕೊಡಲು ಗ್ರಾಮ ಪಂಚಾಯ್ತಿ ಹಿಂದೇಟು ಹಾಕಿತ್ತು. ಹೀಗಾಗಿ ಬೇರೇ ಎಲ್ಲಿಯಾದರೂ ಜಾಗ ಕೊಡಿ ಅಲ್ಲಿಯವರೆಗೆ ಗ್ರಾಮ ಪಂಚಾಯ್ತಿಯಲ್ಲೇ ಡೋಲಿ ಇರಲಿ ಎಂಬ ವಾದವೂ ವ್ಯಕ್ತವಾಯಿತು. ಈ ಹಿನ್ನೆಲೆ ಕೆಲಹೊತ್ತು ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ತಹಶೀಲ್ದಾರ ಡಾ. ಸಂತೋಷಕುಮಾರ ಬಿರಾದಾರ ಭೇಟಿ ನೀಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಂಡು, ಗ್ರಾಮಸ್ಥರೊಂದಿಗೆ ಶಾಂತಿ ಸಭೆಯನ್ನೂ ಸಹ ನಡೆಸಿದರು.
ಕೊನೆಗೆ ಜಾಗದ ವ್ಯಾಜ್ಯ ಕೋರ್ಟ್‌ನಲ್ಲಿ ಇರುವ ಕಾರಣ ಅದು ಬಗೆಹರಿಯೋವರೆಗೆ ಡೋಲಿಗೆ ಅಲ್ಲಿ ಶಾಶ್ವತ ಜಾಗ ಕೊಡಲು ಗ್ರಾಮ ಪಂಚಾಯ್ತಿ ಹಿಂದೇಟು ಹಾಕಿದೆ. ಹೀಗಾಗಿ ಡೋಲಿ ಎಲ್ಲಿಡಬೇಕು ಎನ್ನುವ ಪ್ರಶ್ನೆ ಉದ್ಭವಿಸಿದ್ದು, ಆ ಬಗ್ಗೆ ಗ್ರಾಮದ ಹಿರಿಯರು ಸಭೆ ಸೇರಿ ಮುಂದಿನ ನಿರ್ಣಯ ಕೈಗೊಳ್ಳಲು ಸದ್ಯಕ್ಕೆ ನಿರ್ಣಯಿಸಲಾಗಿದೆ. ಡೋಲಿ ಗದ್ದಲದಿಂದಾಗಿ ಕೆಲವೊಂದು ವದಂತಿಗಳೂ ಸಹ ಹಬ್ಬಿದ್ದರಿಂದ ಅನೇಕರು ಮನಗುಂಡಿಯಲ್ಲಿ ಗಲಾಟೆ ಆಗಿದೆ ಅಂತೆಲ್ಲ ಮಾತನಾಡಿಕೊಂಡಿದ್ದರು. ಹೀಗಾಗಿ ಪೊಲೀಸ್ ಬಂದೋಬಸ್ತ್ ಸಹ ನಿಯೋಜಿಸಲಾಗಿತ್ತು. ಸದ್ಯ ಡೋಲಿ ಎಲ್ಲಿಡಬೇಕು ಎನ್ನುವುದನ್ನು ಗ್ರಾಮದ ಹಿರಿಯರೇ ನಿರ್ಧರಿಸಲಿದ್ದಾರೆ.
Kshetra Samachara
05/06/2022 01:04 pm