ಹುಬ್ಬಳ್ಳಿ: ಹುಬ್ಬಳ್ಳಿಯ ಲವ್ ಜಿಹಾದ್ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪವನ್ನು ಪಡೆಯುತ್ತಿದೆ. ಹಿಂದೂ ಯುವತಿ, ಮುಸ್ಲಿಂ ಯುವಕನ ನಡುವೆ ನಡೆದ ಮದುವೆ ಬಗ್ಗೆ ಈಗಾಗಲೇ ಪೋಷಕರು ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ಮಧ್ಯೆಯೇ ಇದೀಗ ಯುವತಿ ಹರಿಬಿಟ್ಟಿರುವ ವಿಡಿಯೋ ಮತ್ತೊಂದು ಟ್ವಿಸ್ಟ್‌ಗೆ ಕಾರಣವಾಗಿದೆ.
ಹೀಗೆ ಠಾಣೆಯ ಎದುರು ನಡೆಯುತ್ತಿರುವ ಪೋಷಕರ ವಾಗ್ವಾದ. ಹೇಗಾದ್ರೂ ಮಾಡಿ ನಮ್ಮ ಮಗಳನ್ನ ನಮ್ಮ ಜೊತೆ ಕಳಿಸಿ ಕೊಡಿ ಅಂತು ಅವಲತ್ತುಕೊಳ್ಳುತ್ತಿರುವ ಹೆತ್ತವರು. ಹುಬ್ಬಳ್ಳಿಯ ಹಿಂದೂ ಮುಸ್ಲಿಂ-ಮದುವೆ ಇದೀಗ ಲವ್ ಜಿಹಾದ್ ಅನ್ನೋ ಆರೋಪವನ್ನ ಪಡೆದುಕೊಂಡಿದೆ. ಹಿಂದೂ ಯುವತಿ ಸ್ನೇಹಾ ಮತ್ತು ಮುಸ್ಲಿಂ ಯುವಕ ಇಬ್ರಾಹಿಂ ಈಗಾಗಲೇ ಮದುವೆ ಆಗಿದ್ದು, ಇದಕ್ಕೆ ಪೋಷಕರು ಮತ್ತು ಹಿಂದೂ ಪರ ಸಂಘಟನೆಗಳು ನಿನ್ನೆ ರಾತ್ರಿಯಿಂದಲೇ ಪ್ರತಿಭಟನೆ ಹಾದಿ ಹಿಡಿದಿವೆ. ನಮ್ಮ ಮಗಳನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ಮದುವೆ ಆಗಿದ್ದಾರೆ. ಇದು ಲವ್ ಜಿಹಾದ್ ಅಂತ ಪೋಷಕರು ಆರೋಪಿಸಿದ್ರೆ ಇತ್ತ ಮದುವೆ ಆಗಿರುವ ಸ್ನೇಹಾ ಮಾತ್ರ ವಿಡಿಯೋ ಮೂಲಕ ತನ್ನ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾಳೆ. ಆಕೆ ಏನು ಹೇಳಿದ್ದಾಳೆ ಅಂತ ನೀವೇ ಕೇಳಿ
ಇನ್ನು ನಿನ್ನೆಯಿಂದಲೇ ಯುವತಿಯನ್ನು ಕರೆತರಬೇಕು ಅಂತ ಪೊಲೀಸರಿಗೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಡುವು ನೀಡಿದ್ದರು. ಇಲ್ಲದಿದ್ರೆ ಎಲ್ಲಾ ಹಿಂದೂ ಸಂಘಟನೆಗಳ ಮೂಲಕ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆ ಇಂದು ಯುವತಿಯನ್ನು ಗೋವಾದಿಂದ ಕರೆತಂದಿರೋ ಪೊಲೀಸರು ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಪೋಷಕರ ಜೊತೆ ಕೆಲಕಾಲ ಯುವತಿಯ ಮನವೊಲಿಕೆ ಮಾಡಿದ್ರೂ ಕೂಡ ಯುವತಿ ಮಾತ್ರ ಮತ್ತೆ ತನ್ನ ಮನೆಗೆ ಹೋಗಲು ಹಿಂದೇಟು ಹಾಕಿದ್ದಾಳೆ. ಇದರಿಂದ ಪೋಷಕರಲ್ಲಿ ಆಕ್ರೋಶ ಹೆಚ್ಚಾಗಿದೆ. ಮನೆಯಲ್ಲಿ ಈಗಾಗಲೇ ಸ್ನೇಹಾ ಅಜ್ಜಿ ಗಂಭೀರ ಸ್ಥಿತಿಗೆ ತಲುಪಿದ್ದು, ಒಂದು ತಾಸಿನ ಮಟ್ಟಿಗಾದರೂ ಕಳುಹಿಸಿ ಕೊಡಿ ಅಂತ ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಪೊಲೀಸರು ಸೇರಿದಂತೆ ಯುವತಿ ಸಹ ಒಪ್ಪಿಗೆ ನೀಡಿಲ್ಲ.
ಒಟ್ಟಾರೆ ಮೊದಲು ಲವ್ ಜಿಹಾದ್ ಅನ್ನೋ ಆರೋಪವಿದ್ದ ಈ ಪ್ರಕರಣ ಇದೀಗ ಪರಸ್ಪರ ಒಪ್ಪಿಗೆ ಮೂಲಕವೇ ಆಗಿದೆ ಅನ್ನೋದು ಯುವತಿಯ ಸ್ಪಷ್ಟನೆ ಮೂಲಕ ಗೊತ್ತಾಗುತ್ತಿದೆ. ನಮ್ಮ ಮುಖ ನೋಡಿದ ಮೇಲಾದ್ರೂ ಮಗಳು ಮನೆಗೆ ಬರ್ತಾಳೆ ಅನ್ನೋ ನಂಬಿಕೆಯಲ್ಲಿದ್ದ ಪೋಷಕರಿಗೆ ಮಗಳು ಬರಲ್ಲ ಅಂತ ಕಡ್ಡಿ ಮುರಿದಂತೆ ಹೇಳಿದ್ದು ಮತ್ತೊಂದು ಶಾಕ್ ಕೊಟ್ಟಿದೆ. ಹುಚ್ಚು ಪ್ರೀತಿಗಾಗಿ ಕರುಳ ಸಂಬಂಧಿಗಳನ್ನೇ ತಿರಸ್ಕಾರ ಮಾಡಿದ ಮಗಳ ನಿರ್ಧಾರದಿಂದ ಪೋಷಕರು ಶೋಕ, ಅವಮಾನ, ಆಕ್ರೋಶದ ಕುಲುಮೆಯಲ್ಲಿ ಕುದ್ದು ಹೋಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/04/2022 06:13 pm