ಹುಬ್ಬಳ್ಳಿ: ಅದು ಸುಮಾರು ದಶಕಗಳ ಹೋರಾಟ. ಈ ಹೋರಾಟ ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟದ ಕಿಚ್ಚನ್ನು ಹೊತ್ತಿಸಿದ್ದ ಬಹುದೊಡ್ಡ ಯೋಜನೆ. ಈ ಯೋಜನೆಯಿಂದ ಅನುಕೂಲ ಆಗುತ್ತದೆ ಎಂದುಕೊಂಡಿದ್ದವರಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಈಗ ಮತ್ತೇ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಅಷ್ಟಕ್ಕೂ ಯಾವುದು ಆ ಹೋರಾಟ ಅಂತೀರಾ ? ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್.
ಉತ್ತರ ಕರ್ನಾಟಕದ ರೈತರ ಹಾಗೂ ಈ ಭಾಗದ ಜನರ ಬಹುದೊಡ್ಡ ಹೋರಾಟ ಅಂದರೆ ಅದು ಮಹದಾಯಿ ಹೋರಾಟ. ಇಂದಿಗೂ ನಿರಂತರವಾಗಿ ನೀರಿಗಾಗಿ ಈ ಭಾಗದ ರೈತರು, ಸಂಘ, ಸಂಸ್ಥೆಗಳು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಹೀಗೆ ನೀರಿಗಾಗಿ ಹೋರಾಟ ಮಾಡ್ತಿರುವ ರೈತರ ಮೇಲೆ ಹಾಕಿರುವ ಕೇಂದ್ರ ಸರ್ಕಾರದ ಕೇಸ್ ಇದುವರೆಗೂ ಹಿಂಪಡೆದಿಲ್ಲ.
ಹೋರಾಟದ ವೇಳೆ ರೈಲ್ವೆ ತಡೆ ನಡೆಸಿದ್ದ ಐದು ನೂರಕ್ಕೂ ಹೆಚ್ಚು ಜನ ರೈತರಿಗೆ ಸಮನ್ಸ್ ಜಾರಿಯಾಗುತ್ತಲೇ ಇದೆ. ಇದರ ಪರಿಣಾಮವಾಗಿ ಇಂದಿಗೂ ರೈತರು ಎಲ್ಲಾ ಕೆಲಸ ಬಿಟ್ಟು ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ಇದರ ಮಧ್ಯದಲ್ಲಿ ನೀರಿಗಾಗಿ ರೈತರು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಗೆಜೆಟ್ ನೋಟಿಪಿಕೇಶನ್ ಆಗಿದ್ದರೂ ಕೂಡ ಕಾಮಗಾರಿ ಆರಂಭಗೊಂಡಿಲ್ಲ. ನೀರಿಗಾಗಿ ದಾರಿ ಕಾಯುತ್ತಿರುವವರಿಗೆ ನಿರಾಸೆ ಭಾವನೆ ಮೂಡುತ್ತಿದೆ.
ಇನ್ನೂ ಉತ್ತರ ಕರ್ನಾಟಕ ಭಾಗದ ನವಲಗುಂದ, ನರಗುಂದ ಹಾಗೂ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ ರೈತರು ಸೇರಿದಂತೆ ಜಿಲ್ಲೆಯ ಹೋರಾಟಗಾರರ ಮೇಲೆ ನೂರಕ್ಕೂ ಅಧಿಕ ಕೇಸ್ ಗಳಿವೆ. ಹೀಗಿದ್ದರೂ ಕೂಡ ರೈತರು ಮಹದಾಯಿ ನೀರು ತರಲು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈಗಾಗಲೇ ಈ ಭಾಗದ ಸಚಿವರು, ಮುಖ್ಯಮಂತ್ರಿಗಳು ಸಾಕಷ್ಟು ಭರವಸೆ ನೀಡಿದ್ದರೂ ಕೂಡ ಯಾವುದೇ ಕೆಲಸವಾಗಿಲ್ಲ. ಹೋರಾಟ ಮಾಡಿಯೇ ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬೇಕಿದೆ ಎನ್ನುತ್ತಾರೆ ರೈತ ಮುಖಂಡರು.
ಒಟ್ಟಿನಲ್ಲಿ ಕುಡಿಯುವ ನೀರಿಗಾಗಿ ಈ ಭಾಗದ ಜನರು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಅದೆಷ್ಟೋ ಕೇಸ್ ಗಳಿದ್ದರೂ ಹಿಂದೇಟು ಹಾಕದೇ ಮತ್ತೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇನ್ನಾದರೂ ಹೋರಾಟಕ್ಕೆ ನ್ಯಾಯ ಸಿಗಲಿದೆಯೇ ಕಾದುನೋಡಬೇಕಿದೆ.
Kshetra Samachara
25/06/2022 05:40 pm