ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ 112 ತುರ್ತು ಸ್ಪಂದನೆ ವ್ಯವಸ್ಥೆಯಲ್ಲಿ ಸಿಬ್ಬಂದಿ ಕೊರತೆ!

ಹುಬ್ಬಳ್ಳಿ: ಸಾಕಷ್ಟು ಜನಪರ ಕಾರ್ಯಗಳ ಮೂಲಕ ಜನರ ಸೇವೆ ಮಾಡುತ್ತಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆ ಉದ್ಬವಿಸುತ್ತಲೇ ಇದೆ. ತುರ್ತು ಸಂದರ್ಭ ಹಾಗೂ ಅಪರಾಧ ಪ್ರಕರಣ ತಡೆಗಟ್ಟಲು ಪೊಲೀಸ್ ಇಲಾಖೆ ಜಾರಿಗೆ ತಂದ 112 ತುರ್ತು ಸ್ಪಂದನ ವ್ಯವಸ್ಥೆ (ಎಆರ್‌ಎಸ್‌ಎಸ್‌)ಗೆ ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇದರಿಂದಾಗಿ ಎಎಸ್ಐ ಇಲ್ಲದೆ ಕರ್ತವ್ಯ ನಿರ್ವಹಿಸುವಂತಾಗಿದೆ.

ಹೌದು.. ಕಮಿಷನರೇಟ್‌ನಲ್ಲಿರುವ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ 112 ಸೇವೆ ಇದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಈ ತಂಡ ತನ್ನ ಠಾಣಾ ವ್ಯಾಪ್ತಿಯಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಮೂರು ಪಾಳಿಯಂತೆ ಕರ್ತವ್ಯ ನಿರ್ವಹಿಸುತ್ತದೆ. ಕಂಟ್ರೋಲ್ ರೂಂನಿಂದ ಕರೆ ಬಂದ ತಕ್ಷಣ, ಘಟನಾ ಸ್ಥಳಕ್ಕೆ ಐದರಿಂದ ಹತ್ತು ನಿಮಿಷದಲ್ಲಿ ಸಿಬ್ಬಂದಿ ಹಾಜರಾಗುತ್ತಾರೆ. ಸಣ್ಣ ಪ್ರಕರಣಗಳಾದರೆ ಅಲ್ಲಿಯೇ ಕಾನೂನು ಸಲಹೆ ಸೂಚನೆ ನೀಡಿ ಪರಿಹಾರ ಒದಗಿಸುತ್ತಾರೆ. ಅಪರಾಧ ಪ್ರಕರಣ ದಾಖಲಿಸುವುದು ಅನಿವಾರ್ಯವಾದರೆ ಠಾಣೆಗೆ ಹಸ್ತಾಂತರಿಸುತ್ತಾರೆ.

ಮೂವರು ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾದ 112 ವಾಹನದಲ್ಲಿ ಬಹುತೇಕ ಇಬ್ಬರೇ ಸಿಬ್ಬಂದಿ ಇದ್ದಾರೆ. ಎಎಸ್ಐ ಮುಂದಾಳತ್ವದಲ್ಲಿ ಮುನ್ನಡೆಯಬೇಕಾದ ಈ ತಂಡವನ್ನು ಹೆಡ್ ಕಾನ್‌ಸ್ಟೆಬಲ್ ಮುನ್ನಡೆಸುತ್ತಿದ್ದಾರೆ‌. ರಾತ್ರಿ ಪಾಳಿಯಲ್ಲಂತೂ ಎಎಸ್‌ಐ ಸಿಬ್ಬಂದಿ ಇರುವುದು ತೀರ ಅಪರೂಪ. ಸಿಬ್ಬಂದಿ ಕೊರತೆಯಿಂದಾಗಿ ಬೆಳಗಿನ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯೇ, ರಾತ್ರಿ ಪಾಳೆಗೆ ಬರುತ್ತಾರೆ. ವಾರದ ರಜೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಿಯಮಾವಳಿ ಪ್ರಕಾರ 112ಗೆ ಒಂದು ವಾಹನದಲ್ಲಿ ಎಎಸ್ಐ, ಹೆಡ್ ಕಾನ್‌ಸ್ಟೆಬಲ್‌ ಮತ್ತು ಚಾಲಕ(ಸಿಎಆರ್) ಇರಬೇಕು. ಅಪರಾಧ ಪ್ರಕರಣಗಳೇನಾದರೂ ನಡೆದರೆ ಅದನ್ನು ಎಎಸ್ಐ ಗ್ರೇಡ್‌ ಸಿಬ್ಬಂದಿಯೇ ವಿಚಾರಣೆ ನಡೆಸಿ, ನೋಂದಣಿ ಮಾಡಿಕೊಳ್ಳಬೇಕು. ಸಿಬ್ಬಂದಿ ಕೊರತೆಯಿಂದಾಗಿ ಬಹುತೇಕ ರಾತ್ರಿ ಪಾಳಿಯಲ್ಲಿ ಎಎಸ್ಐ ಇಲ್ಲದೆ ಕರ್ತವ್ಯ ನಿರ್ವಹಿಸುವಂತಾಗಿದೆ.

ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಮೂರು ಪಾಳಿ(ಎ, ಬಿ, ಸಿ)ಗಳಲ್ಲಿ ಮೂವರು ಸಿಬ್ಬಂದಿಯಂತೆ ಒಂಬತ್ತು ಮಂದಿ ಕರ್ತವ್ಯ ನಿರ್ವಹಿಸುತ್ತಾರೆ. ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ನಲ್ಲಿ ಮಾತ್ರ ಸಿಬ್ಬಂದಿ ಒಂದೇ ದಿನ ಎರಡು ಪಾಳಿಯ ಕೆಲಸ ಮಾಡುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

02/06/2022 02:25 pm

Cinque Terre

24.8 K

Cinque Terre

1

ಸಂಬಂಧಿತ ಸುದ್ದಿ