ಧಾರವಾಡ: ಕೊರೊನಾ ವೈರಸ್‌ನ ರೂಪಾಂತರಿಯಾದ ಓಮಿಕ್ರಾನ್ ಸೋಂಕನ್ನು ತಡೆಯುವ ದೃಷ್ಟಿಯಿಂದ ಹಾಗೂ ಹೊಸ ವರ್ಷಾಚರಣೆಯಲ್ಲಿ ದೊಡ್ಡಮಟ್ಟದಲ್ಲಿ ಜನ ಸೇರಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಮಾಡಿದೆ.
ರಾತ್ರಿ 10 ಗಂಟೆಯಿಂದ ಬೆಳಗಿನ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ರಾತ್ರಿ 9 ಗಂಟೆಗೆ ಎಲ್ಲಾ ಬಾರ್, ರೆಸ್ಟೋರೆಂಟ್, ಹೋಟೆಲ್, ಮಾರುಕಟ್ಟೆ ಸೇರಿದಂತೆ ಎಲ್ಲವನ್ನೂ ಬಂದ್ ಮಾಡಬೇಕು. 10 ಗಂಟೆಯಷ್ಟೊತ್ತಿಗೆ ಎಲ್ಲೂ ಜನದಟ್ಟಣೆ ಕಾಣಬಾರದು ಎಂದು ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.
ಸರ್ಕಾರ ಹೊರಡಿಸಿರುವ ಈ ಮಾರ್ಗ ಸೂಚಿಗೆ ಧಾರವಾಡದ ಹೋಟೆಲ್ ಉದ್ಯಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಸದ್ಯ ಈ ಉದ್ಯಮ ಚೇತರಿಸಿಕೊಳ್ಳುವ ಹೊತ್ತಿನಲ್ಲೇ ಸರ್ಕಾರ ಮತ್ತೊಂದು ಹೊಸ ಮಾರ್ಗಸೂಚಿ ಹೊರಡಿಸಿ ಉದ್ಯಮಿಗಳ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ರಾತ್ರಿ ವೇಳೆಯೇ ಕೊರೊನಾ ಬರುತ್ತದೆಯೇ? ರಾಜಕೀಯ ಸಮಾವೇಶ, ಸಭೆಗಳಲ್ಲಿ ಕೊರೊನಾ ಹರಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಒಟ್ಟಾರೆಯಾಗಿ ಇಂದಿನಿಂದ ರಾಜ್ಯ ಸರ್ಕಾರ ಜಾರಿ ಮಾಡಿರುವ ನೈಟ್ ಕರ್ಫ್ಯೂಗೆ ಧಾರವಾಡದಲ್ಲೂ ವ್ಯಾಪಾರಸ್ಥರು ಹಾಗೂ ಉದ್ಯಮಿಗಳು ಒಲ್ಲದ ಮನಸ್ಸಿನ ಬೆಂಬಲ ಸೂಚಿಸಿದ್ದಾರೆ.
Kshetra Samachara
28/12/2021 06:01 pm