ಹುಬ್ಬಳ್ಳಿ:ಕೃಷಿ ಇಲಾಖೆಯಿಂದ ಪರವಾನಗಿ ಮತ್ತು ನೋಂದಣಿ ಇಲ್ಲದ ಕೀಟ ನಾಶಕ ಮಾರಾಟ ಮಾಡುತ್ತಿದ್ದ ನಗರದ ಸೂರ್ಯ ಅಗ್ರೋ ಏಜೆನ್ಸೀಜ್ ಹಾಗೂ ವಿಜಯ ಲಕ್ಷ್ಮೀ ಸೀಡ್ಸ್ ಕಾರ್ಪೋರೇಶನ್ ಕೀಟ ನಾಶಕ ಮಾರಾಟ ಮಳಿಗೆ ಮೇಲೆ ಕೃಷಿ ಅಧಿಕಾರಿಗಳು ದಾಳಿ ಮಾಡಿ 3.50 ಲಕ್ಷ ರೂ. ವೌಲ್ಯದ ಅನಧೀಕೃತ ಕೀಟ ನಾಶಕ ವಶಪಡಿಸಿಕೊಂಡಿದ್ದಾರೆ.
ಕೀಟ ನಾಶಕಗಳ ಕಾಯಿದೆ ಉಲ್ಲಂಘಿಸಿ ದಾಸ್ತಾನು ಮಾಡಿದ್ದ 133.750 ಲೀ. ನೈಟ್ರೋಜೆನ್ ಅಂಶ ಹೊಂದಿರುವ ಸ್ಮಾರ್ಟ್ ಹಾಗೂ 169 ಜಿಅಗ್ರೋ ಕೀಟನಾಶಕಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಎ. ಅಣಗೌಡರ ತಿಳಿಸಿದ್ದಾರೆ.
ಕೀಟನಾಶಕ ಕಾಯಿದೆ 1968 ಸೆಕ್ಷನ್ 29(1)ಸಿ ಮತ್ತು 29(1)(ಬಿ) ಅಡಿ ಅಪರಾಧವಾಗಿರುತ್ತದೆ. ಹೀಗಾಗಿ ಸಂಸ್ಥೆ ವಿರುದ್ಧ ಕೋರ್ಟ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಬೆಳಗಾವಿ ವಿಭಾಗದ ಜಾರಿ ದಳದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ, ಧಾರವಾಡ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ, ಉಪಕೃಷಿ ನಿರ್ದೇಶಕ-2 ಎಂ.ಬಿ. ಅಂತರವಳ್ಳಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಜಾರಿದಳದ ಮಹಾಂತೇಶ ಕಿಣಗಿ, ಆರ್.ಎ. ಅಣಗೌಡರ, ರಾಘವೇಂದ್ರ ಬಮ್ಮಿಗಟ್ಟಿ, ವಿ.ವಿ. ವಿಠಲರಾವ್, ವಿ.ಬಿ. ಪುರಾಣಿಕ ಪಾಲ್ಗೊಂಡಿದ್ದರು.
Kshetra Samachara
07/12/2020 07:37 pm