ಧಾರವಾಡ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ಆ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡುತ್ತಿತ್ತು. ಬಂಧು, ಮಿತ್ರರು ಬಂದು ವಧು, ವರರಿಗೆ ಆಶೀರ್ವದಿಸುತ್ತಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು.
ಹೀಗೆ ಮರಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿರುವ ಕ್ರೂಸರ್ ವಾಹನ, ಮದುವೆಯ ಸಂಭ್ರಮದಲ್ಲಿರಬೇಕಿದ್ದ ಮನೆ ಮುಂದೆ ನೀರವ ಮೌನ.
ನಿನ್ನೆ ತಡರಾತ್ರಿ ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿ ದಿಬ್ಬಣಕ್ಕೆಂದು ಬಂದವರು ಮಸಣ ಸೇರುವಂತಾಗಿದೆ.
ಬೆನಕಣಕಟ್ಟಿ ಕ್ರಾಸ್‌ನಲ್ಲಿ ಮನೆ ಹೊಂದಿರುವ ನಿಗದಿ ಗ್ರಾಮದ ಕಲ್ಲಪ್ಪ ದಾಸನಕೊಪ್ಪ ಎಂಬುವವರ ಪುತ್ರ ಮಂಜುನಾಥ ಅವರ ವಿವಾಹ ಮನಸೂರು ಗ್ರಾಮದ ರೇವಣಸಿದ್ದೇಶ್ವರ ಮಠದಲ್ಲಿ ನಡೆಯುತ್ತಿತ್ತು. ನಿನ್ನೆ ರಾತ್ರಿ ನಿಶ್ಚಿತಾರ್ಥ ಕೂಡ ಇಟ್ಟುಕೊಳ್ಳಲಾಗಿತ್ತು. ಈ ನಿಶ್ಚಿತಾರ್ಥಕ್ಕೆ ಬಂಧು, ಮಿತ್ರರು ಕ್ರೂಸರ್ ವಾಹನದಲ್ಲಿ ಹೋಗಿ ನಿಶ್ಚಿತಾರ್ಥ ಮುಗಿಸಿಕೊಂಡು ಮರಳಿ ಬರುತ್ತಿದ್ದ ವೇಳೆ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ.
ಅನನ್ಯ, ಹರೀಶ, ಶಿಲ್ಪಾ, ನೀಲವ್ವ, ಮಧುಶ್ರೀ, ಮಹೇಶ್ವರಯ್ಯ, ಶಂಭುಲಿಂಗಯ್ಯ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನುಳಿದ 9 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಅಪಘಾತವಾದ ಸುದ್ದಿ ತಿಳಿದ ಕೂಡಲೇ ಮದುವೆ ಮಂಟಪವನ್ನು ಸಂಬಂಧಿಕರು ಖಾಲಿ ಮಾಡಿದ್ದಾರೆ. ತಾಳಿ ಕಟ್ಟುವ ಶಾಸ್ತ್ರ ಕೂಡ ನಿನ್ನೆಯೇ ಮುಗಿದಿತ್ತು. ಹೀಗಾಗಿ ವಧು, ವರರ ಸಮೇತ ಸಂಬಂಧಿಕರು ಕಲ್ಯಾಣಮಂಟಪನ್ನು ಖಾಲಿ ಮಾಡಲಾಗಿದ್ದು, ಇಂದಿನ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/05/2022 09:50 am