ಕುಂದಗೋಳ : ರಷ್ಯಾ ಮತ್ತು ಉಕ್ರೇನ್ ಸಮರದಲ್ಲಿ ರಾಣೆಬೆನ್ನೂರಿನ ವಿದ್ಯಾರ್ಥಿ ನವೀನ್ ಗ್ಯಾನಗೌಡರ ಶೆಲ್ ದಾಳಿಗೆ ಬಲಿಯಾದ ವಿಷಯ ತಿಳಿದು ಇತ್ತ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಉಕ್ರೇನ್ ವಿದ್ಯಾರ್ಥಿ ಚೈತ್ರಾ ಸಂಶಿ ಕುಟುಂಬಸ್ಥರಲ್ಲೂ ಸಹ ಆತಂಕ ಮನೆ ಮಾಡಿದೆ.
ಇಷ್ಟು ದಿನ ಮೊಬೈಲ್ ಕರೆ ಮಾಡಿ ಉಕ್ರೇನ್ ದೇಶದ ಖಾರ್ಕೀವ್'ನಿಂದ ತನ್ನ ಪರಿಸ್ಥಿತಿ ಕುರಿತು ಯರಗುಪ್ಪಿಯ ತಂದೆ ಗಂಗಾಧರ ಸಂಶಿಗೆ ಮಾಹಿತಿ ನೀಡುತ್ತಿದ್ದ ಮಗಳು ಚೈತ್ರಾಳ ಮೊಬೈಲ್ ಸ್ವಿಚ್ ಆಫ್ ಆದ ಪರಿಣಾಮ, ಕುಟುಂಬವರು ಮತ್ತಷ್ಟು ಎದೆ ಗುಂದಿದ್ದಾರೆ.
ಇಲ್ಲಿಯವರೆಗೆ ಉಕ್ರೇನ್ ವಿದ್ಯಾರ್ಥಿ ಚೈತ್ರಾ ಸಂಶಿ ಯರಗುಪ್ಪಿ ಮನೆಗೆ ಎಸ್ಪಿ ಕೃಷ್ಣಕಾಂತ್, ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಮ್.ಎಸ್.ಅಕ್ಕಿ, ಬಿಜೆಪಿ ಮುಖಂಡ ಎಮ್.ಆರ್.ಪಾಟೀಲ್ ಹಾಗೂ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಗ್ರಾಮಕ್ಕೆ ಭೇಟಿಕೊಟ್ಟು ಚೈತ್ರಾ ಸಂಶಿ ಅವರ ತಂದೆ ಗಂಗಾಧರ ಸಂಶಿಗೆ ಪರಿಸ್ಥಿತಿಯ ಮಾಹಿತಿ ನೀಡುತ್ತಾ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ.
ಇಂದು ಚೈತ್ರಾ ಸಂಶಿ ಕುಟುಂಬದವರನ್ನು ಭೇಟಿ ಮಾಡಲು ಜಿಲ್ಲಾಧಿಕಾರಿ ನಿತೇಶ್ ಪಟೇಲ್ ಬರುವ ಮಾಹಿತಿ ಲಭ್ಯವಿದ್ದು, ಒಟ್ಟಿನಲ್ಲಿ ಏನಾದ್ರೂ ಮಾಡಿ ಉಕ್ರೇನ್ ದೇಶದ ಉದ್ವಿಗ್ನ ಸ್ಥಿತಿಯಲ್ಲಿ ಸಿಲುಕಿದ ಮಗಳನ್ನು ಭಾರತಕ್ಕೆ ಕರೆ ತರುವಂತೆ ತಂದೆ ಗಂಗಾಧರ ಸಂಶಿ ತಾಯಿ ಹಾಗೂ ಕುಟುಂಬಸ್ಥರು ಕಣ್ಣೀರ ಮನವಿ ಸಲ್ಲಿಸುತ್ತಿದ್ದಾರೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
02/03/2022 07:19 pm