ಹುಬ್ಬಳ್ಳಿ: ಅದು ಹುಬ್ಬಳ್ಳಿಯ ತಾಲೂಕಿನ ಸಣ್ಣ ಹಳ್ಳಿ. ಮಳೆ ಬಂದರೇ ಈ ಹಳ್ಳಿಗೆ ಹಳ್ಳಿಯೇ ಹಳ್ಳವಾಗಿ ಪರಿಣಮಿಸುತ್ತದೆ. ಮಳೆ ನೀರಿಗಿಂತ ಹೆಚ್ಚಾಗಿ ಕಣ್ಣೀರಿನ ಹೊಳೆಯೇ ಹರೆಯುತ್ತಿದೆ. ಅಷ್ಟಕ್ಕೂ ಯಾವುದು ಆ ಹಳ್ಳಿ? ಅಲ್ಲಿನ ಜನರ ಗೋಳು ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ...
ಹೀಗೆ ಜಲಾವೃತವಾಗಿರುವ ಮನೆಗಳು. ಕೆಸರು ಗದ್ದೆಯಂತಾದ ರಸ್ತೆಗಳು. ಈ ಎಲ್ಲ ನರಕ ಸದೃಶ್ಯಕ್ಕೆ ಸಾಕ್ಷಿಯಾಗಿದ್ದು ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮ. ಹೌದು. ಕೆರೆಯ ಕೋಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಮಂಟೂರು ಗ್ರಾಮದಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮಳೆ ನೀರಿಗಿಂತ ಜನರ ಕಣ್ಣೀರೇ ಹೆಚ್ಚಾಗಿ ಕಾಣುತ್ತಿದೆ. ಕೆರೆ ನೀರಿನ ಜೊತೆಗೆ ಮನೆಗಳಿಗೆ ಡ್ರೈನೇಜ್ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಮಳೆ ನೀರು ಹೊರ ಹಾಕೋಕೆ ಗ್ರಾಮಸ್ಥರ ಹರಸಾಹಸ ಪಡುವಂತಾಗಿದೆ. ದವಸ, ಧಾನ್ಯ ಸಾಮಾನುಗಳು ಮಳೆ ನೀರುಪಾಲಾಗಿದ್ದು, ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಇಷ್ಟು ಸಮಸ್ಯೆಗಳು ಉದ್ಭವಿಸಿದ್ದರೂ ಯಾವೊಬ್ಬ ಜನಪ್ರತಿನಿಧಿ ಈ ಕಡೆ ಗಮನ ಹರಿಸಿಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಜನಪ್ರತಿನಿಧಿ ಮತ್ತು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಗರಂ ಆಗಿದ್ದು, ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಪುನರಾವರ್ತನೆ ಆಗುತ್ತದೆ. ಕೆರೆ ನೀರು ಹತ್ತಾರು ಮನೆಗಳಿಗೆ ನುಗ್ಗುತ್ತದೆ. ಈ ಕುರಿತು ಮನವಿ ಕೊಟ್ಟು ಸಾಕಾಗಿದೆ. ಸ್ವತಃ ಸಕ್ಕರೆ, ಜವಳಿ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ತವರು ಕ್ಷೇತ್ರವಾದರೂ ಸ್ಪಂದನೆ ಸಿಗ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಂಟೂರು ಗ್ರಾಮದ ಸ್ಥಿತಿ ನಿಜಕ್ಕೂ ಬೇಸರ ಮೂಡಿಸುವಂತಿದ್ದು, ಈಗಲಾದರೂ ಸಮಸ್ಯೆಗೆ ಸ್ಪಂದಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಶಾಶ್ವತ ಪರಿಹಾರಕ್ಕೆ ಮಂಟೂರು ಗ್ರಾಮಸ್ಥರ ಮನವಿ ಮಾಡಿದ್ದಾರೆ.
Kshetra Samachara
07/10/2022 05:35 pm