ಹುಬ್ಬಳ್ಳಿ: ಒಂದೆಡೆ ತಗ್ಗು ಬಿದ್ದಿರುವ ಗುಂಡಿಗಳು, ಆ ಗುಂಡಿಗಳಲ್ಲಿ ಚರಂಡಿ ನೀರು. ಮತ್ತೊಂದೆಡೆ ಆ ಕೊಳಚೆ ನೀರಲ್ಲಿ ಬಿಜೆಪಿ ಚಿಹ್ನೆಯಿರುವ ಮುದ್ರಿತ ಕರಪತ್ರಗಳನ್ನು ಹರಿಬಿಡುತ್ತಾ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ಸಾರ್ವಜನಿಕರು. ಈ ದೃಶ್ಯ ಕಂಡು ಬಂದಿದ್ದು ಹುಬ್ಬಳ್ಳಿಯ ವಿದ್ಯಾನಗರದಲ್ಲಿ!
ನಗರದ ಪ್ರತಿಷ್ಠಿತ ಬಡಾವಣೆ ವಿದ್ಯಾನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಆದರೆ, ಅಧಿಕಾರಿಗಳ ಎಡವಟ್ಟಿನಿಂದ ಸ್ಥಳೀಯರು ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಇವತ್ತು ಸ್ಥಳೀಯ ನಿವಾಸಿಗಳು ತಮ್ಮ ಬಡಾವಣೆಗೆ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿದರು.
ಮೊದಲೇ ಮಳೆಯಿಂದ ರಸ್ತೆಗಳು ಹಾಳಾಗಿವೆ. ಎಲ್ಲೆಂದರಲ್ಲಿ ಗುಂಡಿ ಬಿದ್ದು ಜನರು ಓಡಾಡಲು ಆಗದ ಸ್ಥಿತಿ ಇದೆ. ಅದರಲ್ಲೂ 4- 5 ತಿಂಗಳಿಂದ ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದು, ಮನೆಗಳಿಗೂ ನೀರು ನುಗ್ಗಿವೆ. ಹೀಗಾಗಿ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದ್ದು, ಇತ್ತ ಮನೆಯಲ್ಲಿರಲು ಆಗದೆ ಬೇರೆಡೆ ಹೋಗಲೂ ಆಗದೇ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಸ್ಥಳೀಯರು.
ಈಗಾಗಲೇ ಹು-ಧಾ ಮಹಾನಗರ ಸ್ಮಾರ್ಟ್ ಸಿಟಿ ಹಣೆಪಟ್ಟಿ ಕಟ್ಟಿಕೊಂಡಿದೆ. ಆದರೆ, ನಗರ ಮಾತ್ರ ಸ್ಮಾರ್ಟ್ ಆಗುತ್ತಿಲ್ಲ. ಅಧಿಕಾರಿಗಳು ಮಾತ್ರ ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಿನಲ್ಲಿ ಬೇಕಾಬಿಟ್ಟಿ ಕಾಮಗಾರಿ ಮಾಡಿ ಜನರ ಜೀವ ಹಿಂಡುತ್ತಿದ್ದಾರೆ. ಜನರು ಸಮಸ್ಯೆ ಅನುಭವಿಸುತ್ತಾ ಇದ್ದರೂ ಪಾಲಿಕೆ ಸದಸ್ಯರು ಹಾಗೂ ಇತರ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
- ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
02/09/2022 08:03 pm