ಕುಂದಗೋಳ: ಅವರು ಸಹ ಹುಟ್ಟು ಭಾರತಿಯರೇ. ಆದ್ರೆ, ಅವರಿಗೆ ಇಂದಿಗೂ ಪಡಿತರ ಚೀಟಿ ಸಿಕ್ಕಿಲ್ಲ! ಅವರ ಸೂರಿಗೆ ದಾರಿ ನಿರ್ಮಾಣ ಆಗಿಲ್ಲ. ಹೀಗೆ "ಇಲ್ಲ"ಗಳ ಸರಮಾಲೆಯೇ ಅವರ ಜೀವನ.
ಇದು ಕುಂದಗೋಳ ಮತಕ್ಷೇತ್ರದ ಅದರಗುಂಚಿ ಗ್ರಾಮದ ಮುದೆನ್ನವರ ಹಕ್ಕಲದ ಅಂಚಿಕಟ್ಟಿ ಓಣಿ ನಿವಾಸಿಗಳ ದಾರುಣ ಚಿತ್ರಣ. ಹಲವು ದಿನಗಳಿಂದಲೂ ಧೋ ಎಂದು ಸುರಿಯುತ್ತಿರುವ ಮಳೆ ಇಲ್ಲಿನ ನಿವಾಸಿಗಳನ್ನು ಸಂಕಷ್ಟದ ಕೂಪಕ್ಕೆ ತಳ್ಳಿದ್ದು, ಈ ಓಣಿ ರಸ್ತೆಗಳೆಲ್ಲ ಕೆಸರುಮಯವಾಗಿದೆ.
ಚರಂಡಿ, ವಿದ್ಯುತ್, ನೀರು ಸಹಿತ ಮೂಲ ಸೌಕರ್ಯಗಳ ಪಾಲಿನ ಎಲ್ಲ ವ್ಯವಸ್ಥೆ ಇವರಿಂದ ದೂರವಾಗಿದ್ದು, ಬದುಕಿಗೆ ಆಧಾರವಾಗಿರುವ ಕೃಷಿ ಕಾಯಕವೂ ವರುಣನ ಅಬ್ಬರದ ಕಾರಣದಿಂದಾಗಿ ಬಂದ್ ಆಗಿ ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ.
ತಮ್ಮ ಓಣಿಗೆ ಮೂಲ ಸೌಕರ್ಯಗಳ ಸಹಿತ ಅನ್ನ ಭಾಗ್ಯ ನೀಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳನ್ನು ಭೇಟಿಯಾಗಿ ವಿನಂತಿಸಿದರೂ ಯಾವುದೇ ಪರಿಹಾರ ಮಾರ್ಗ ಸಿಕ್ಕಿಲ್ಲ. ಒಟ್ಟಾರೆ ಈ ಬಡಪಾಯಿ ನಿವಾಸಿಗಳ ಈ ದುಸ್ಥಿತಿಯತ್ತ ಜಿಲ್ಲಾಧಿಕಾರಿಗಳು ಗಮನ ಹರಿಸಿ ಅವರ ಬೇಡಿಕೆ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
- ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
13/07/2022 02:21 pm