ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಜನರ ಸಮಸ್ಯೆ ಹೇಗೆ ಇದೆ ಅಂದರೆ ಕುಡಿಯುವ ನೀರು ಕೂಡ ಸರಿಯಾಗಿ ಸಿಗದೇ ಪ್ರತಿಯೊಂದು ಸೌಲಭ್ಯಕ್ಕೂ ಹೋರಾಟ ಮಾಡುವಂತಾಗಿದೆ. ನೀರು ಪೂರೈಕೆಯಲ್ಲಿನ ನಿರಂತರ ವ್ಯತ್ಯಯದಿಂದಾಗಿ ಅವಳಿ ನಗರದಲ್ಲಿ ಇಂದಿಗೂ ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾಗಿದೆ!
ಹೌದು... ಹಳೆ ಹುಬ್ಬಳ್ಳಿ, ಬೀಡಿ ಕಾರ್ಮಿಕರ ನಗರ, ಸ್ವರಾಜನಗರ, ಪಂಪನಗರ, ಬಂಜಾರ ಕಾಲೊನಿ, ಜಗದೀಶ ನಗರ, ಹುಬ್ಬಳ್ಳಿ, ಅಯೋಧ್ಯಾನಗರ, ಎಸ್.ಎಂ. ಕೃಷ್ಣ ನಗರ, ವೀರಾಪುರ ಓಣಿ, ಬಿಡನಾಳ, ಕರ್ಕಿ ಬಸವೇಶ್ವರನಗರ, ಗೋಕುಲ ರಸ್ತೆ ಸೇರಿದಂತೆ ವಿವಿಧೆಡೆ ಹಲವು ದಿನಗಳಿಂದ 7 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಯಾಗಿರುವ ಬಡಾವಣೆಗಳಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸದಿರುವುದರಿಂದ, ಆ ಪ್ರದೇಶಗಳ ಜನ ಟ್ಯಾಂಕರ್ ನೀರನ್ನೇ ಅವಲಂಬಿಸುವಂತಾಗಿದೆ. ಹುಬ್ಬಳ್ಳಿಯಲ್ಲಿ ಒಟ್ಟು 18 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. 6 ಸಾವಿರ ಲೀಟರ್‌ನ ಒಂದು ಟ್ಯಾಂಕರ್‌ಗೆ 550 ಹಾಗೂ 3 ಸಾವಿರ ಲೀಟರ್ ಟ್ಯಾಂಕರ್‌ಗೆ 350 ದರ ನಿಗದಿ ಮಾಡಲಾಗಿದೆ.
ಟ್ಯಾಂಕರ್ ನೀರು ಪೂರೈಸಲು ತಿಂಗಳಿಗೆ ಸುಮಾರು 20 ಲಕ್ಷದವರೆಗೆ ವೆಚ್ಚ ಮಾಡಲಾಗುತ್ತಿದೆ. ವಾರ್ಷಿಕ 2.5 ಕೋಟಿಗೂ ಹೆಚ್ಚು ಮೊತ್ತವನ್ನು ಇದಕ್ಕಾಗಿ ವ್ಯಯಿಸಲಾಗುತ್ತಿದೆ. ಆದರೂ, ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಜಲಮಂಡಳಿ ಪ್ರಕಾರ, ಪಾಲಿಕೆ ವ್ಯಾಪ್ತಿಯಲ್ಲಿ 1,200 ಕೊಳವೆಬಾವಿಗಳಿವೆ. ಅಂತರ್ಜಲ ಮಟ್ಟ ಕುಸಿತದ ಹಿನ್ನೆಲೆಯಲ್ಲಿ, ಇದೀಗ ಕೊಳವೆಬಾವಿಗಳನ್ನು ಕೊರೆಯುವುದಕ್ಕೆ ಕಡಿವಾಣ ಹಾಕಲಾಗಿದೆ.
ಇನ್ನೂ ಹಲವೆಡೆ ಟ್ಯಾಂಕರ್ ನೀರು ಕೂಡ ಸಕಾಲದಲ್ಲಿ ಪೂರೈಕೆಯಾಗದಿರುವುದರಿಂದ ಜನ ಕುಡಿಯುವುದಕ್ಕಾಗಿ ಕ್ಯಾನ್ ನೀರು ಬಳಸುತ್ತಿದ್ದಾರೆ. ಅವಳಿನಗರದಲ್ಲಿ ನಿತ್ಯ 12 ಸಾವಿರ ನೀರಿನ ಕ್ಯಾನ್ ಮಾರಾಟವಾಗುತ್ತಿವೆ. 20 ಲೀಟರ್‌ನ ಒಂದು ಕ್ಯಾನ್ ನೀರಿಗೆ ಕನಿಷ್ಠ 40 ಕೊಟ್ಟು ಖರೀದಿಸಬೇಕಿದೆ. ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ ನೀರಿಗೆ ಬೇಡಿಕೆ ಹೆಚ್ಚಾಗಿದ್ದು, ವಿವಿಧ ಬ್ರ್ಯಾಂಡ್‌ನ ನೀರಿನ ಕ್ಯಾನ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.
Kshetra Samachara
11/06/2022 10:14 pm