ಹುಬ್ಬಳ್ಳಿ: ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿಯೇ ಇಲ್ಲದಂತಾಗಿದೆ. ಜಲಮಂಡಳಿ ಇದ್ದರೂ ಅಷ್ಟೇ, ಎಲ್ ಆ್ಯಂಡ್ ಟಿ ಬಂದರೂ ಅಷ್ಟೇ, ಇಲ್ಲಿನ ಜನರ ಸಮಸ್ಯೆಗೆ ಮಾತ್ರ ಪರಿಹಾರವೇ ಇಲ್ಲವಾಗಿದೆ.
ಹುಬ್ಬಳ್ಳಿಯ ಆಯಕಟ್ಟಿನ ಪ್ರದೇಶಗಳಲ್ಲಿ ಒಂದಾಗಿರುವ ಕೇಶ್ವಾಪೂರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. 24×7 ಕುಡಿಯುವ ನೀರಿನ ಭರವಸೆಯನ್ನು ನೀಡಿರುವ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ನೀಡಿದೆ. ಆದ್ರೆ ಇದುವರೆಗೂ, ಜಲಮಂಡಳಿಯಿಂದ ಆಗಲಿ ಅಥವಾ ಮೊನ್ನೆಯಷ್ಟೇ ಕರ್ತವ್ಯ ನಿರ್ವಹಿಸುತ್ತಿರುವ ಖಾಸಗಿ ಕಂಪನಿಯಿಂದ ಯಾವುದೇ ನೀರು ಸರಬರಾಜು ಸರಿಯಾಗಿ ಆಗುತ್ತಿಲ್ಲ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಲ್ಲದೇ ಈಗಾಗಲೇ ಬೇಸಿಗೆ ಆರಂಭವಾಗಿದ್ದು, ನೀರಿಗಾಗಿ ಪರದಾಡುವಂತಾಗಿದೆ. ನಾವೆಲ್ಲರೂ ಮಹಾನಗರ ಪಾಲಿಕೆಗೆ ಕರ ಸಂದಾಯ ಮಾಡುತ್ತಿದ್ದೇವೆ. ಆದರೆ ನಮಗೆ ಸರಿಯಾದ ರೀತಿಯಲ್ಲಿ ಮೂಲಭೂತ ಸೌಕರ್ಯಗಳು ದೊರೆಯುತ್ತಿಲ್ಲ. 24×7 ಕುಡಿಯುವ ನೀರು ಸರಬರಾಜು ಅಂತ ಹೇಳುವ ಮಹಾನಗರ ಪಾಲಿಕೆ ಇಲ್ಲಿ ವಾರಕ್ಕೊಮ್ಮೆ ನೀರನ್ನು ಸರಬರಾಜು ಮಾಡುತ್ತಿದೆ. ಈ ಹಿಂದೆ ಇದ್ದ ಜಲಮಂಡಳಿಯೂ ಕೂಡ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಿಲ್ಲ. ಅಲ್ಲದೇ ಈಗ ಬಂದಿರುವ ಎಲ್ ಆ್ಯಂಡ್ ಟಿ ಕಂಪನಿಯಿಂದ ಕೂಡ ನೀರಿನ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ ಎಂಬುವುದು ಸಾರ್ವಜನಿಕರ ಮಾತಾಗಿದೆ.
ಒಟ್ಟಿನಲ್ಲಿ ಯಾರೇ ಬಂದರೂ ಯಾವುದೇ ಸಂಸ್ಥೆ ಬಂದರೂ ಇಲ್ಲಿನ ಜನರ ಸಮಸ್ಯೆ ಮಾತ್ರ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇನ್ನಾದರೂ ಸ್ಥಳೀಯ ಆಡಳಿತ ಮಂಡಳಿ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಕಾರ್ಯವನ್ನು ಮಾಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/04/2022 04:36 pm