ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಸವ ಕಾಲೋನಿಯಲ್ಲಿ ಕುಡಿಯುವ ನೀರಿಗಾಗಿ ಬಸವಳಿದ ಜನ: ನೀರಿಗಾಗಿ ಜನರ ಕಣ್ಣೀರು

ಹುಬ್ಬಳ್ಳಿ: ಬಿಸಿಲಿನ ತಾಪ ಆರಂಭವಾಗುವ ಮುಂಚೆಯೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ. ಕುಡಿಯುವ ನೀರು ಪೂರೈಕೆಗಾಗಿ ಸಾಕಷ್ಟು ಯೋಜನೆ ತಂದು ಕೋಟ್ಯಾಂತರ ರೂಪಾಯಿ ವ್ಯಯ ಮಾಡಿದರು ಇಲ್ಲಿನ ಜನರು ಮಾತ್ರ ಕುಡಿಯುವ ನೀರು ಪಡೆಯಲು ಹರಸಾಹಸ ಮಾಡಬೇಕಿದೆ.

ಹೌದು.. ಮಹಾನಗರವಾಗಿ ಬೆಳೆದ ಹುಬ್ಬಳ್ಳಿ ಹಲವು ಅಭಿವೃದ್ಧಿ ಯೋಜನೆಗಳ ಮೂಲಕ ಗಮನ ಸೆಳೆದರೂ ಇಲ್ಲಿನ ಅಮರಗೋಳದಲ್ಲಿರುವ ಎಪಿಎಂಸಿಯ ಬಸವ ಕಾಲೊನಿಗೆ ಮಾತ್ರ ಈಗಲೂ ಕುಡಿಯುವ ನೀರಿನ ಸೌಲಭ್ಯವಿಲ್ಲ. ವಾರಕ್ಕೆ ಎರಡು ಸಲ ಬರುವ ಎರಡು ಟ್ಯಾಂಕರ್‌ ನೀರೇ ಅಲ್ಲಿನ ಜನರಿಗೆ ಆಧಾರ.

ಎಪಿಎಂಸಿಯಲ್ಲಿ ಕೆಲಸ ಮಾಡುವ ಹಮಾಲರು ಬಸವ ಕಾಲೊನಿಯಲ್ಲಿ ವಾಸವಾಗಿದ್ದಾರೆ. ಅಲ್ಲಿ 132 ವಸತಿ ಗೃಹಗಳಿದ್ದು ಒಂದು ಸಾವಿರಕ್ಕೂ ಹೆಚ್ಚು ಜನ ಇದ್ದಾರೆ. ಅವರೆಲ್ಲರೂ ನಿತ್ಯದ ಕೂಲಿಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಬರುವ ಟ್ಯಾಂಕರ್‌ ನೀರಿಗಾಗಿ ಹಪಾಹಪಿಯಿಂದಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ನೀರಿನ ಸಂಪರ್ಕ ಕಲ್ಪಿಸಲು ಕೊಳವೆಗಳನ್ನೂ ಹಾಕಿಲ್ಲ.

ಚುನಾವಣೆ ಬಂದಾಗ ಬಸವ ಕಾಲೊನಿಯ ಜನ ಕುಡಿಯವ ನೀರಿನ ಬೇಡಿಕೆ ಈಡೇರಿಸಿ ಎಂದು ಜನಪ್ರತಿನಿಧಿಗಳ ಮುಂದೆ ಆಗ್ರಹಿಸುತ್ತಾರೆ. ಮತಬೇಟೆಗಾಗಿ ನಿಮ್ಮ ಭರವಸೆ ಈಡೇರಿಸುತ್ತೇವೆ ಎಂದು ಜನ ನಾಯಕರು ಆಶ್ವಾಸನೆ ಕೊಡುತ್ತಿದ್ದಾರೆಯೇ ಹೊರತು, 22 ವರ್ಷಗಳಿಂದ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಬಹುತೇಕ ಕುಟುಂಬಗಳು ಟ್ಯಾಂಕರ್ ಬರುತ್ತಿದ್ದಂತೆ ನೀರಿಗಾಗಿ ತಾ ಮುಂದು, ನಾ ಮುಂದು ಎಂದು ಜಿದ್ದಿಗೆ ಬೀಳುತ್ತಾರೆ. ಬೇರೆ ಸಮಯದಲ್ಲಿ ಎಲ್ಲರೂ ಒಂದಾಗಿದ್ದರೂ, ನೀರು ಬಂದಾಗ ಮಾತ್ರ ಪರಸ್ಪರ ಮನಸ್ತಾಪಗಳಾಗುತ್ತವೆ. ಟ್ಯಾಂಕರ್‌ ನೀರು ಖಾಲಿಯಾದರೆ ಮತ್ತೆ ಕುಡಿಯುವ ನೀರಿಗಾಗಿ ಅಲೆದಾಡಬೇಕು ಎನ್ನುವ ಸಂಕಷ್ಟಕ್ಕೆ ಜನ ನೀರು ತುಂಬಿಟ್ಟುಕೊಳ್ಳಲು ಪೈಪೋಟಿಗೆ ಇಳಿಯುತ್ತಾರೆ. ಸಣ್ಣ ಪಾತ್ರೆಗಳಲ್ಲೂ ನೀರು ಸಂಗ್ರಹಿಸಿಟ್ಟುಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ.

Edited By : Manjunath H D
Kshetra Samachara

Kshetra Samachara

05/02/2022 03:21 pm

Cinque Terre

47.55 K

Cinque Terre

0

ಸಂಬಂಧಿತ ಸುದ್ದಿ