ಧಾರವಾಡ: ನವಲೂರು ಗ್ರಾಮದ ಬಳಿ ಬಿಆರ್‌ಟಿಎಸ್ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿರುವ ರಸ್ತೆ ಕಾಮಗಾರಿಗೆ ನವಲೂರು ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗುತ್ತಿದೆ.
ಈ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದ್ದು, ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ ಎಂದು ಆರೋಪಿಸಿ ನವಲೂರು ಗ್ರಾಮಸ್ಥರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಿನ್ನೆಯಷ್ಟೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಇಬ್ಬರು ಪಾಲಿಕೆ ಸದಸ್ಯರು ಮತ್ತು ಗ್ರಾಮಸ್ಥರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದ್ದರು. ಇಂದು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ನವಲೂರು ಗ್ರಾಮಸ್ಥರು ಕಳಪೆ ಗುಣಮಟ್ಟದ ಕಾಮಗಾರಿ ನಡೆಸದಂತೆ ಆಗ್ರಹಿಸಿದರು.
ನವಲೂರು ಛಾವಣಿ ಮುಂದೆ ಬಸ್ ನಿಲ್ದಾಣ ಮಾಡಬೇಕು. ರಸ್ತೆ ಕಾಮಗಾರಿಯನ್ನು ಎತ್ತರಕ್ಕೆ ಮಾಡಿದರೆ ನವಲೂರು ಗ್ರಾಮ ತಗ್ಗು ಪ್ರದೇಶದಲ್ಲಿ ಉಳಿದಂತಾಗುತ್ತದೆ. ಇಳಿಜಾರಿನ ರೀತಿಯಲ್ಲಿ ಕಾಮಗಾರಿ ನಡೆಸಬೇಕು. ಅಲ್ಲದೇ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
Kshetra Samachara
06/01/2022 03:28 pm