ಹುಬ್ಬಳ್ಳಿ: ಸಾರ್ವಜನಿಕರ ಬಹುದಿನಗಳ ಬೇಡಿಕೆ ಮೇರೆಗೆ ಹುಬ್ಬಳ್ಳಿಯಿಂದ ಬೀದರ್ ಗೆ ನಾನ್ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ ಎಂದು ವಾಕರಸಾಸಂಸ್ಥೆ ಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಇದುವರೆಗೂ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಬೀದರ್ ಗೆ ನೇರವಾಗಿ ಐಷಾರಾಮಿ ಬಸ್ ಸಂಚಾರ ಇರಲಿಲ್ಲ. ಹುಬ್ಬಳ್ಳಿಯಿಂದ ಬೀದರ್ ಗೆ ಹೋಗುವವರು ಕಲಬುರಗಿ ವರೆಗೆ ಹೋಗಿ ಅಲ್ಲಿಂದ ಮತ್ತೊಂದು ಬಸ್ ಹತ್ತಿ ಬೀದರ್ ಗೆ ತಲುಪಬೇಕಾಗಿತ್ತು. ಬೆಳಗಿನ ಜಾವದಲ್ಲಿ ನಿದ್ರೆ ಮಂಪರಿನಲ್ಲಿರುವಾಗ ಎರಡೆರಡು ಬಸ್ ಬದಲಾಯಿಸ ಬೇಕಾದ್ದರಿಂದ ಈ ಪ್ರಯಾಣ ಪ್ರಯಾಸಕರವಾಗಿತ್ತು. ಈ ಹಿನ್ನೆಲೆಯಲ್ಲಿ ನೇರ ಬಸ್ ಸೌಲಭ್ಯ ಕೋರಿ ಸಾರ್ವಜನಿಕರಿಂದ ಮನವಿಗಳು ಬಂದಿದ್ದವು. ಅದರಂತೆ ಎರಡು ನಗರಗಳ ನಡುವೆ ಹೊಸದಾಗಿ ಸ್ಲೀಪರ್ ಬಸ್ ಸಂಚಾರ ಆರಂಭಿಸಲಾಗಿದೆ. ಈ ಬಸ್ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಹುಬ್ಬಳ್ಳಿಯಿಂದ ರಾತ್ರಿ 9-15 ಕ್ಕೆ ಹೊರಡುತ್ತದೆ. ನವಲಗುಂದ,ನರಗುಂದ,ವಿಜಯಪುರ(ಬೆ.1-45 )ಕಲಬುರಗಿ ( ಬೆ.5-00) ಮಾರ್ಗವಾಗಿ ಮರುದಿನ ಬೆಳಿಗ್ಗೆ 7-30ಕ್ಕೆ ಬೀದರ್ ತಲುಪುತ್ತದೆ.
ಬೀದರ್ ನಿಂದ ರಾತ್ರಿ 8-45ಕ್ಕೆ ಹೊರಟು ಕಲಬುರಗಿ(ರಾ.11-15 ),ವಿಜಯಪುರ( ಬೆ.2-30)ಮಾರ್ಗವಾಗಿ ಹುಬ್ಬಳ್ಳಿಗೆ ಬೆಳಿಗ್ಗೆ 7-00 ಕ್ಕೆ ಆಗಮಿಸುತ್ತದೆ. ಪ್ರೋತ್ಸಾಹಕ ಪ್ರಯಾಣ ದರ ರೂ. 910 ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Kshetra Samachara
10/12/2021 04:15 pm