ಧಾರವಾಡ: ಅಬಬಬಾ.. ಇದೇನ ತಿಪ್ಪ್ಯೋ ಇಲ್ಲಾ ಹೊಸಯಲ್ಲಾಪುರದಾಗಿನ ಡಂಪಿಂಗ್ ಯಾರ್ಡೋ ತಿಳಿವಲ್ದ ನೋಡ್ರಿ. ಒಮ್ಮೆ ಇದರ ಹಂತೇಲಿ ಹೋಗಿ ಬಿಟ್ರ ನಿಮಗ ಕೊರೊನಾ, ಚಿಕೂನ್ ಗುನ್ಯಾ, ಡೆಂಗ್ಯೂ ಎಲ್ಲಾ ಸೇರಿ ಒಮ್ಮೆ ಬಂದ ಡಿಶುಂ ಅಂತ ಹಾದ ಹೊಕ್ಕಾವ ನೋಡ್ರಿ.
ಅಂದಂಗ ಇದ ಯಾವ ಜಾಗಾ ರೀ ಅಂತ ನೀವು ವಿಚಾರ ಮಾಡಾಕತ್ತೀರಿ ಹೌದಿಲ್ಲೋ? ಅದ ರೀ ನಮ್ಮ ಧಾರವಾಡದಾಗ ಶಿವಾಜಿ ಸರ್ಕಲ್ ಹಂತೇಲಿ ಐತೆಲ್ಲ ಹಳೇ ಎಪಿಎಂಸಿ ಅದರ ಕಥಿ ಇದು.
ಈಗ ಈ ಎಪಿಎಂಸಿಯನ್ನ ಬ್ಯಾರೆ ಶಿಫ್ಟ್ ಮಾಡ್ಯಾರ. ಆದ್ರೂ ಇಲ್ಲೆ ಕೆಲವೊಂದಿಷ್ಟು ವ್ಯಾಪಾರ, ವಹಿವಾಟು ನಡೀತಾವ. ಇದು ಧಾರವಾಡ ನಡು ಊರಾಗ ಐತ್ರ್ಯಾ ಮತ್ತ. ಹಿಂಗ್ ಇರಬೇಕಾದ್ರ ಈ ಎಪಿಎಂಸಿ ಸ್ಥಿತಿ ಒಂದ ಸಲಾ ಒಳಗ ಹೊಕ್ಕ ನೋಡಿಬಿಟ್ರ. ಎಲ್ಲಾರೂ ಹಣಿ ಹಣಿ ಜಜ್ಜಕೋಳುದ.
ಎಲ್ಲಂದ್ರ ಅಲ್ಲಿ ಕಸಾ, ಎಪಿಎಂಸಿ ತುಂಬ ಶೆರೆ ಪಾಕೀಟಾ, ಎಲ್ಲಂದ್ರ ಅಲ್ಲಿ ಬಯಲು ಮೂತ್ರ ವಿಸರ್ಜನೆ ಪಾಯಿಂಟ್‌ಗಳು, ಆ ಕಡೆಯಿಂದ ಈ ಕಡೆ ಈ ಕಡೆಯಿಂದ ಆಕಡೆ ಓಡ್ಯಾಡು ಹಂದಿಗೋಳು ಛೇ ಛೇ ಛೇ ಬ್ಯಾಡ್ರಿ ಪಾ. ಸ್ವಚ್ಛ ಭಾರತ ಸ್ವಚ್ಛ ಭಾರತ ಅಂತ ಅನ್ನೋ ನಮ್ಮ ಪ್ರಧಾನ ಮಂತ್ರಿಗಳು ಇದನ್ನ ನೋಡಿಬಿಟ್ರ ನಮ್ಮ ಧಾರವಾಡದ ಜನಪ್ರತಿನಿಧಿಗಳ ಬೆನ್ನ ತಟ್ಟಿ ಅವರಿಗೆ ಶಹಬ್ಬಾಷ್ ಗಿರಿ ಕೊಡುದ್ರಾಗ ಎರಡ ಮಾತಿಲ್ಲ ನೋಡ್ರಿ.
ಸರ್ಕಾರದ ಸಾಕಷ್ಟು ಜಗಾ ಹಿಂಗ ಹಾಳ ಆಗಿ ಹೊಂಟೈತಿ. ಈ ಎಪಿಎಂಸಿ ಸ್ವಚ್ಛಗೊಳಿಸಿ ಮತ್ತ್ಯಾವುದಕ್ಕಾದ್ರೂ ಅದನ್ನ ಜನೋಪಯೋಗಿ ಕೆಲಸಕ್ಕೆ ಬಳಸಿಕೊಂಡ್ರ ಉಪಯೋಗ ಆಗೋದಿಲ್ಲೇನ್ರಿ. ಇರ್ಲಿ ಈ ಹಳೇ ಎಪಿಎಂಸಿಗೆ ಒಳ್ಳೆ ಕಾಲ ಯಾವಾಗ ಬರತೈತ್ಯೋ ಕಾದು ನೋಡುಣಂತ.
Kshetra Samachara
10/12/2021 10:37 am