ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಾಳು ಬಿದ್ದ ರೈತಭವನ.. ಹೇಳೋರಿಲ್ಲ ಕೇಳೋರಿಲ್ಲ..

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಧಾರವಾಡದ ಹಳೇ ಎಪಿಎಂಸಿಯಲ್ಲಿರುವ ರೈತ ಭವನ ಹತ್ತಾರು ವರ್ಷಗಳಿಂದ ಪ್ರಯೋಜನಕ್ಕೆ ಬಾರದೇ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಬರುವ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ನಿರ್ಮಾಣವಾಗಿದ್ದ ಈ ರೈತ ಭವನ ಈಗ ಪಾಳು ಬಿದ್ದಿದ್ದು ಕಾಯಕಲ್ಪಕ್ಕಾಗಿ ಕಾಯುತ್ತಿದೆ.

ಧಾರವಾಡ ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಿಂದ ಬರುವ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ, ವಿಶ್ರಾಂತಿ ಪಡೆಯಲು ಹಾಗೂ ಉತ್ಪನ್ನಗಳ ಮಾರಾಟ ತಡವಾದಲ್ಲಿ ತಂಗಲು ಈ ರೈತ ಭವನವನ್ನು ಸುಮಾರು ದಶಕಗಳ ಹಿಂದೆಯೇ ನಿರ್ಮಾಣ ಮಾಡಲಾಗಿತ್ತು. ಆರಂಭದ ದಿನಗಳಲ್ಲಿ ರೈತರಿಗೆ ಉಪಯೋಗವಾದ ಈ ಭವನ ನಂತರದಲ್ಲಿ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ಪ್ರಸ್ತುತ ಕಸ- ಕಡ್ಡಿಯಿಂದ ತುಂಬಿದ್ದು, ಕಟ್ಟಡ ಶಿಥಿಲಗೊಂಡಿದೆ. ಕಟ್ಟಡ ದುಸ್ಥಿತಿಯಲ್ಲಿರುವ ಕಾರಣ ಸದ್ಯ ಅಲ್ಲಿ ಯಾವುದೇ ರೈತ ಚಟುವಟಿಕೆಗಳು ನಡೆಯದೇ ಹಾಳು ಬಿದ್ದಿದೆ.

ಈ ಮೊದಲು ಹಳೆಯ ಎಪಿಎಂಸಿಯಲ್ಲೇ ವ್ಯಾಪಾರ ವಹಿವಾಟು ನಡೆಯುತ್ತಿದ್ದರಿಂದ ಭವನ ತುಸು ನಿರ್ವಹಣೆಯಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ಎಪಿಎಂಸಿಯನ್ನು ಮುರುಘಾಮಠ ಬಳಿ ವರ್ಗಾಯಿಸಿದ್ದರಿಂದ ರೈತ ಭವನ ನಿರ್ಲಕ್ಷಗೊಂಡಿದೆ. ಕಟ್ಟಡವು ತೀರಾ ಹಳೆಯದಾದ ಕಾರಣ ಕಟ್ಟಡ ತೆರವುಗೊಳಿಸಿ ನವೀಕರಣ ಕಾರ್ಯ ನಡೆಯಬೇಕಿದೆ. ಎಪಿಎಂಸಿ ಆಡಳಿತವು ಹಳೆಯ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ, ಸರ್ಕಾರದಿಂದ ಇನ್ನೂ ಸ್ಪಂದನೆ ದೊರೆತಿಲ್ಲ.

ಬೈಟ್ 1: ಡಿ.ಎಸ್.ಕೆಲಗೇರಿ, ಸಾರ್ವಜನಿಕರು

ಇನ್ನೇನು ರೈತ ಭವನ ಸುಧಾರಣೆ ಮಾಡಬೇಕು ಎನ್ನುವಷ್ಟರಲ್ಲಿ ಒಂದು ತೊಂದರೆ ಎದುರಾಗಿದೆ. ಅಂದಾಜು ನಾಲ್ಕು ಗುಂಟೆ ಜಾಗ ಹೊಂದಿರುವ ರೈತ ಭವನ ನಗರದ ಮಧ್ಯದಲ್ಲಿದೆ. ಕೋಟಿಗಟ್ಟಲೇ ಬೆಲೆಬಾಳುವ ಈ ಜಾಗವನ್ನು ತಮಗೆ ಕೊಡಿ ಎಂದು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘವು ಎಪಿಎಂಸಿಗೆ ಅರ್ಜಿ ಸಲ್ಲಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಆದರೆ, ರೈತರಿಗಾಗಿಯೇ ಇರುವ ರೈತ ಭವನವನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು ಎಂದು ಕೆಲವು ರೈತ ಮುಖಂಡರು ಪ್ರತಿಭಟನೆ ನಡೆಸಿ ಎಪಿಎಂಸಿ ಅಧ್ಯಕ್ಷರು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಧಾರವಾಡದಲ್ಲಿನ ರೈತ ಭವನ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಎಪಿಎಂಸಿ ತೀರ್ಮಾನಿಸಿದೆ. ಈ ಮಧ್ಯೆ ಭವನವನ್ನು ತಮಗೆ ಕೊಡಿ ಎಂದು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘವು ಎಪಿಎಂಸಿಗೆ ಅರ್ಜಿ ಸಲ್ಲಿಸಿದೆ. ಆದರೆ, ಈ ಕುರಿತು ಆಡಳಿತ ಮಂಡಳಿಯು ತೀರ್ಮಾನ ಕೈಗೊಳ್ಳಬೇಕಿದೆ ಎಂದು ಎಪಿಎಂಸಿ ಕಾರ್ಯದರ್ಶಿ ವಿ.ಜಿ. ಹಿರೇಮಠ ತಿಳಿಸಿದ್ದಾರೆ.

ಸದ್ಯ ಈ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಇದನ್ನು ಎಪಿಎಂಸಿ ಯಾವ ರೀತಿ ನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By : Shivu K
Kshetra Samachara

Kshetra Samachara

26/10/2021 03:49 pm

Cinque Terre

24.07 K

Cinque Terre

3

ಸಂಬಂಧಿತ ಸುದ್ದಿ