ಹುಬ್ಬಳ್ಳಿ: ಕೊರೋನಾ ಅಬ್ಬರ ಬಹುತೇಕ ತಗ್ಗಿ ಎಲ್ಲ ಚಟುವಟಿಕೆಗಳು ಮೊದಲಿನ ಸ್ಥಿತಿಗೆ ಬಂದಿದ್ದರೂ ವಾ.ಕ.ರ.ಸಾ.ಸಂಸ್ಥೆಯ ಸಿಬ್ಬಂದಿ ಮಾತ್ರ ಪೂರ್ಣ ಪ್ರಮಾಣದ ವೇತನಕ್ಕೆ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಕೊರೋನಾ ನೆಪ ಹಾಗೂ ಸರಕಾರದಿಂದ ಫಂಡ್ ಬಂದಿಲ್ಲ ಎಂಬ ಕಾರಣಕ್ಕೆ ಪೂರ್ಣ ವೇತನ ಪಾವತಿಸಲು ಸಂಸ್ಥೆ ಹಿಂದೇಟು ಹಾಕುತ್ತಿದೆ. ಪರಿಣಾವ ಕಡಿಮೆ ವೇತನದಲ್ಲಿಯೇ ಸಿಬ್ಬಂದಿ ಪೂರ್ಣ ಪ್ರಮಾಣದ ಸೇವೆ ಸಲ್ಲಿಸುವುದು ಅನಿವಾರ್ಯವಾಗಿದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಂದು, ಎರಡನೇ ಅಲೆಯ ಸಂದರ್ಭದಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ಸಾರಿಗೆ ಸೇವೆ, ಈಗ ಮತ್ತೆ ಪುನಾರಂಭವಾಗಿದೆ. ಆದರ ಮೊದಲಿನಂತೆ ಸಂಸ್ಥೆಯ ಬೊಕ್ಕಸಕ್ಕೆ ನಿರೀಕ್ಷಿಸಿದಷ್ಟು ಆದಾಯ ಬರುತ್ತಿಲ್ಲ. ಅದು ನೌಕರರ ವೇತನದ ಮೇಲೆಯೂ ದುಷ್ಪರಿಣಾಮ ಬೀರುವಂತಾಗಿದೆ. ಸದ್ಯ ದಲ್ಲೇ ಆದಾಯ ಹೆಚ್ಚುವ ಸಂಭವವಿದ್ದು, ನೌಕರರ ಬಾಕಿ ವೇತನ ಪಾವತಿಸಲಾಗುವುದು ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ.
ಇನ್ನೂ ನೌಕರರಿಗೆ ಆಗಸ್ಟ್ ತಿಂಗಳಲ್ಲಿ ಶೇ.50ರಷ್ಟು ಮಾತ್ರ ವೇತನ ಪಾವತಿಸಲಾಗಿದೆ. ಉಳಿದದ್ದನ್ನು ಮುಂದೆ ಪಾವತಿಸುವುದಾಗಿ ಹೇಳಲಾಗಿದೆ. ಮಕ್ಕಳ ಫೀ, ಕುಟುಂಬ ನಿರ್ವಹಣೆ ಹಾಗೂ ಸಾಲದ ಕಂತುಗಳನ್ನು ಶೇ.50ರಷ್ಟು ವೇತನದಲ್ಲಿ ಹೇಗೆ ಭರಿಸಲು ಸಾಧ್ಯ ಎಂಬುದು ನೌಕರರ ಅಳಲಾಗಿದೆ. ಅದರ ಜತೆಗೆ ಸೆಪ್ಟೆಂಬರ್ ತಿಂಗಳಲ್ಲಿ ಯಾವುದೇ ನೌಕರರಿಗೂ ಅರ್ಧದಷ್ಟು ವೇತನವನ್ನು ಸಹ ಸಂಸ್ಥೆ ಪಾವತಿಸಿಲ್ಲ. ಬದಲಾಗಿ ಬಾಕಿ ಉಳಿದಿರುವ ಎಲ್ಲ ವೇತನವನ್ನು ಒಂದೇ ಬಾರಿಗೆ ಪಾವತಿಸುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ಸಮಯಕ್ಕೆ ಬಾರದ ವೇತನಕ್ಕೆ ಸಿಬ್ಬಂದಿ ಕಾಯುವಂತಾಗಿದೆ.
ಒಟ್ಟಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟ ಅನುಭವಿಸಿದ್ದ ಸಾರಿಗೆ ಸಿಬ್ಬಂದಿ ಕೋವಿಡ್ ನಂತರದ ದಿನಗಳಲ್ಲಿಯೂ ಸಮಸ್ಯೆ ಅನುಭವಿಸುವಂತಾಗಿದ್ದು, ಕೂಡಲೇ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರು ಸಿಬ್ಬಂದಿ ಕಣ್ಣೀರು ಒರೆಸುವ ಕಾರ್ಯ ಮಾಡಬೇಕಿದೆ.
ಮಲ್ಲೇಶ ಸೂರಣಗಿ,
ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
13/10/2021 06:30 pm