ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನನಸಾಗಲಿದೆಯಾ ಬೈಪಾಸ್ ಅಗಲೀಕರಣದ ಕನಸು?

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಧ್ಯದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿನ ಬೈಪಾಸ್ ರಸ್ತೆಗೆ ಕೊನೆಗೂ ಅಗಲೀಕರಣ ಭಾಗ್ಯ ಸಿಗುವಂತಾಗಿದೆ. ಈ ಬೈಪಾಸ್ ರಸ್ತೆ ಷಟ್ಪಥವಾಗುವ ಕಾಲ ಸನ್ನಿಹಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ರಸ್ತೆಯಲ್ಲಿ ಸಂಭವಿಸುತ್ತಿದ್ದ ಅಪಘಾತಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದು, ದಶಕಗಳ ಬೇಡಿಕೆ ಈಡೇರುವ ನಿರೀಕ್ಷೆ ಮೂಡಿಸಿದೆ. ಇದೀಗ ಭೂಸ್ವಾಧೀನ ಪ್ರಕ್ರಿಯೆ ಆರಂಭದ ಜೊತೆಗೆ ರಸ್ತೆ ನಿರ್ಮಾಣದ ಟೆಂಡರ್ ಕರೆಯುವ ಪ್ರಕ್ರಿಯೆ ಕೂಡ ಆರಂಭವಾಗಿದೆ. ಆ ಮೂಲಕ ಹಲವಾರು ವರ್ಷಗಳ ಕನಸು ನನಸಾಗುವ ಸಾಧ್ಯತೆಗಳು ಕಾಣಿಸಿಕೊಂಡಿವೆ.

ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಹುಬ್ಬಳ್ಳಿಯ ಗಬ್ಬೂರಿನಿಂದ ಧಾರವಾಡದ ನರೇಂದ್ರ ಟೋಲ್‌ಗೇಟ್‌ವರೆಗೆ ಸುಮಾರು 31 ಕಿ.ಮೀ. ಬೈಪಾಸ್ ಹೊಂದಿದೆ. ಬೆಂಗಳೂರಿನಿಂದ ಪುಣೆವರೆಗಿನ ಹೆದ್ದಾರಿ-4 ರಲ್ಲಿ ಬಹುತೇಕ ಚತುಷ್ಪಥ ಹಾಗೂ ಕೆಲವೆಡೆ ಷಟ್ಪಥವಿದೆ. ಆದರೆ, ಹುಬ್ಬಳ್ಳಿ- ಧಾರವಾಡ ನಡುವೆ ಮಾತ್ರ ದ್ವಿಪಥವಾಗಿದೆ. ಗಬ್ಬೂರು ಕ್ರಾಸ್‌ನಿಂದ ನರೇಂದ್ರ ಟೋಲ್‌ಗೇಟ್‌ವರೆಗೆ ಕಿರಿದಾದ ರಸ್ತೆ ಹೊಂದಿದ್ದು, ಬಾಟಲ್ ನೆಕ್ ರೀತಿ ಇದೆ. ಹೀಗಾಗಿ ಪ್ರತಿವರ್ಷ ಅಪಘಾತಗಳು, ಸಂಭವಿಸಿ, ಸಾವು-ನೋವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ದ್ವಿಪಥವನ್ನು ಷಟ್ಪಥ ಮಾಡಬೇಕು ಎಂಬುದು ದಶಕಗಳ ಬೇಡಿಕೆ ಇದೆ. ಆ ಬೇಡಿಕೆ ಇದೀಗ ಈಡೇರುವ ಕಾಲ ಸನ್ನಿಹಿತವಾಗಿದೆ. ಒಂದು ಕಡೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದರೆ, ಮತ್ತೊಂದು ಕಡೆ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಕೂಡ ಆರಂಭಿಸಲಾಗುತ್ತಿದೆ.

ಭೀಕರ ಅಪಘಾತಗಳು ಸಂಭವಿಸಿದಾಗೊಮ್ಮೆ ಸಾರ್ವಜನಿಕರಿಂದ ಬೈಪಾಸ್ ಅಗಲೀಕರಣದ ಕೂಗು ಕೇಳಿ ಬರುತ್ತಿತ್ತು. ಈ ರಸ್ತೆಯನ್ನು 1999 ರಿಂದ 2024 ರವರೆಗೆ ಅಶೋಕ ಖೇಣಿ ಒಡೆತನದ ನಂದಿ ಹೈವೆ ಡೆವೆಲಪರ್ಸ್ ಲಿಮಿಟೆಡ್ ನಿರ್ವಹಿಸುತ್ತಿದ್ದು, ಒಪ್ಪಂದ 2024 ರ ಮೇ 25 ಕ್ಕೆ ಮುಕ್ತಾಯವಾಗಲಿದೆ. ಈ ಬೈಪಾಸ್‌ನಲ್ಲಿ 2021 ರ ಜ.15 ರಂದು ದಾವಣಗೆರೆಯ ಟೆಂಪೊ ಟ್ರಾವೆಲರ್ ಹಾಗೂ ಮರಳು ತುಂಬಿದ್ದ ಟಿಪ್ಪರ್ ಮಧ್ಯೆ ಭೀಕರ ಅಪಘಾತ ಸಂಭವಿಸಿತ್ತು. ದುರಂತದಲ್ಲಿ 10 ಮಹಿಳೆಯರು ಸೇರಿ 12 ಜನ ಮೃತಪಟ್ಟಿದ್ದರು. ಇದೀಗ ರಸ್ತೆಯನ್ನು ಸರ್ಕಾರವೇ ಅಭಿವೃದ್ಧಿಪಡಿಸಿ ಅಪಘಾತಗಳಿಗೆ ಕಡಿವಾಣ ಹಾಕುವ ದಿಟ್ಟ ಕ್ರಮ ಕೈಗೊಂಡಿದೆ.

ಹತ್ತು ವರ್ಷಗಳ ಅವಧಿಯಲ್ಲಿ ಈ ಬೈಪಾಸ್‌ನಲ್ಲಿ ನೂರಾರು ಅಪಘಾತಗಳು ನಡೆದಿದ್ದು, 180 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದೀಗ ಷಟ್ಪಥದ ಜೊತೆಗೆ ಸರ್ವಿಸ್ ರಸ್ತೆ ಮಾಡುವ ಯೋಜನೆ ಕೂಡ ಇದರಲ್ಲಿದೆ. ಹೀಗಾಗಿ ಆದಷ್ಟು ಬೇಗನೇ ಬೈಪಾಸ್ ಅಗಲೀಕರಣವಾದರೆ ಆಹುತಿಯ ದಾಹ ನಿಲ್ಲಲಿದೆ ಎನ್ನುವುದು ಜನರ ನಿರೀಕ್ಷೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By : Shivu K
Kshetra Samachara

Kshetra Samachara

06/10/2021 10:27 am

Cinque Terre

61.67 K

Cinque Terre

20

ಸಂಬಂಧಿತ ಸುದ್ದಿ