ಹುಬ್ಬಳ್ಳಿ: ಅದು ಉತ್ತರ ಕರ್ನಾಟಕ ಭಾಗದ ಜಾನಪದ ಕಲಾವಿದರ ಬಹುದಿನಗಳ ಬೇಡಿಕೆ. ಕಲಾವಿದರ ಒತ್ತಾಯಕ್ಕೆ ಮಣಿದು ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ವೇಳೆ, ಸರ್ಕಾರ ಬಜೆಟ್ ನಲ್ಲಿ ಐದು ಕೋಟಿ ರೂಪಾಯಿ ಘೋಷಣೆ ಮಾಡಿತ್ತು. ಆದರೆ, ಶೆಟ್ಟರ್ ಸರ್ಕಾರ ಹೋದ ಮೇಲೆ ಆ ಯೋಜನೆಯೂ ಬಿದ್ದು ಹೋಗಿದೆ. ಆ ಯೋಜನೆಯಡಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಡಿಪಾಯ ಹಾಕಿದ್ದ ಕಟ್ಟಡ ಇದೀಗ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
2012-13 ರಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್, ಉತ್ತರ ಕರ್ನಾಟಕ ಭಾಗದ ಜಾನಪದ ಕಲೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಜಾನಪದ ಜಗತ್ತು ಎಂಬ ಯೋಜನೆ ಜಾರಿಗೆ ತಂದಿದ್ದರು. ಯೋಜನೆಗಾಗಿ ಬಜೆಟ್ ನಲ್ಲಿ 5 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದರು. ಅಲ್ಲದೇ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಬಳಿ ಐದು ಎಕರೆ, ಇಪ್ಪತ್ತು ಗುಂಟೆ ಜಮೀನು ಗುರುತಿಸಿ, ಆಡಳಿತ ಕಚೇರಿ ನಿರ್ಮಾಣ ಕಾಮಗಾರಿ ಕೂಡ ಆರಂಭಿಸಿದ್ದರು. 75 ಲಕ್ಷ ರೂಪಾಯಿ ಹಣ ವ್ಯಯಿಸಿ ಕಟ್ಟಡದ ಅಡಿಪಾಯ ಹಾಗೂ ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಜಗದೀಶ್ ಶೆಟ್ಟರ್ ಸರ್ಕಾರ ಬದಲಾವಣೆಯಾದ ಬಳಿಕ ಯೋಜನೆ ಮೂಲೆಗುಂಪಾಗಿ ಹೋಗಿದೆ. ಅಲ್ಲದೇ ಅರ್ಧಕ್ಕೆ ನಿಂತಿರೋ ಕಟ್ಟಡ ಇದೀಗ ಅಕ್ರಮ ಚಟುವಟಿಕೆಗಳ ತಾಣವಾಗಿದೆ..
ಇನ್ನೂ ಜಗದಿಶ್ ಶೆಟ್ಟರ್ ಸರ್ಕಾರ ಬದಲಾವಣೆಯಾದ ಬಳಿಕ ಹಲವು ಕಾರಣಗಳಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಕಲಾವಿದರು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿ, ಅನುದಾನ ನೀಡುವಂತೆ ಕೇಳಿಕೊಂಡರು ಯಾವುದೇ ಪ್ರಯೋಜನ ಆಗುತ್ತಿಲ್ಲ. ಕಳೆದ ಆರು ವರ್ಷದಿಂದ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದು, ಯೋಜನೆ ಕೌಂಪೌಂಡ್‌ಗಷ್ಟೇ ಸೀಮಿತವಾಗಿದೆ.
ಒಟ್ಟಾರೆ ಜಾನಪದ ಕಲೆಗಳ ಉಳಿಸುವ ನಿಟ್ಟಿನಲ್ಲಿ ಹಾಕಿಕೊಂಡಿದ್ದ ಯೋಜನೆ ಜಾರಿಗೆ ಬಂದಿದ್ದರೆ, ಜಾನಪದ ಜಗತ್ತು ಹುಬ್ಬಳ್ಳಿಯಲ್ಲಿ ತಲೆ ಎತ್ತುತ್ತಿತ್ತು. ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳ ಉಳಿಸಿ, ಬೆಳೆಸುವ ಕಲಾವಿದರ ಕನಸು ನನಸಾಗುತ್ತಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಇಶ್ಛಾಶಕ್ತಿ ಕೊರತೆಯಿಂದ ಯೋಜನೆ ಹಳ್ಳಹಿಡಿದಿದ್ದು, ವ್ಯಯಿಸಿದ ಲಕ್ಷಾಂತರ ರೂಪಾಯಿ ಹಣ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿರೋದು ದುರಂತವೇ ಸರಿ.
Kshetra Samachara
04/10/2021 04:45 pm