ಹುಬ್ಬಳ್ಳಿ: ಇ-ಶೌಚಾಲಯ ಅಂದರೆ ಅಲ್ಲಿ ನೀರು, ಸ್ವಚ್ಛತೆ ಹಾಗೂ ಉತ್ತಮ ವಾತಾವರಣ ಇರುವುದು ಸಾಮಾನ್ಯ ಆದರೆ, ಹುಬ್ಬಳ್ಳಿಯ ಬಹುತೇಕ (15) ಇ- ಶೌಚಾಲಯ ಗಳು ನೀರು ಹಾಗೂ ಸ್ವಚ್ಛತೆಯ ಕೊರತೆ ಎದುರಿಸುತ್ತಿವೆ. ಪರಿಣಾಮ ಇ ಶೌಚಾಲಯ ಹೋಗಿ, ಛೀ ಶೌಚಾಲಯ ಆದಂತಾಗಿವೆ.
ಹೌದು.. ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಅನುಷ್ಠಾನಕ್ಕೆ ತರಲಾದ ಇ-ಶೌಚಾಲಯ ನಿರ್ವಹಣೆ ಇಲ್ಲದೆ ಗಬ್ಬೇದ್ದು ಹೋಗಿದ್ದು, ಅದನ್ನು ಬಳಸುವುದಿರಲಿ, ಅತ್ತಕಡೆ ತಿರುಗಿಯೂ ನೋಡದಂತಾಗಿದೆ. ಹುಬ್ಬಳ್ಳಿಯ ಇಟಗಿ ಮಾರುತಿ ಗಲ್ಲಿಯ ಅಂಚಿನಲ್ಲಿರುವ ಇ-ಶೌಚಾಲಯವು ನೀರು, ಸ್ವಚ್ಚತೆ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಸಂಪೂರ್ಣ ಹಾಳಾಗಿ ಹೋಗಿದ್ದು, ಸ್ಪಷ್ಟ ಉದಾಹರಣೆಯಾಗಿದೆ. ಗಬ್ಬೇದ್ದು ಹೋಗಿರುವ ಶೌಚಾಲಯದ ಎದುರು ಅಲ್ಲಿನ ನಿವಾಸಿಗಳು ತ್ಯಾಜ್ಯ ಹಾಕುವುದು, ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ಇಡೀ ಪ್ರದೇಶವು ಕೊಳಚೆಯಂತಾಗಿದೆ ಎಂದು ಅಲ್ಲಿನ ಸಾರ್ವಜನಿಕರ ಆರೋಪವಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಅನುಷ್ಠಾನಕ್ಕೆ ತರಲಾದ ಇ-ಶೌಚಾಲಯಗಳನ್ನು ಪ್ರಾಯೋಗಿಕ ಎಂಬಂತೆ ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್, ನೆಹರೂ ಸ್ಟೇಡಿಯಂ ಹಾಗೂ ಇಟಗಿ ಮಾರುತಿ ಗಲ್ಲಿ ಸೇರಿದಂತೆ 16 ಕಡೆಗಳಲ್ಲಿ ಇಡಲಾಯಿತು. ಅದಕ್ಕೆ ಪೂರಕವಾಗಿ ಸ್ಮಾರ್ಟ್‌ಸಿಟಿ ಕಾಮಗಾರಿಯನ್ನು ಆರಂಭದಲ್ಲಿ ಬಿಳಿ ಆನೆಯೆ ಬರುತ್ತಿದೆ ಎಂಬಂತೆ ಸ್ಥಳೀಯ ಜನಪ್ರತಿನಿಗಳು ಹಾಗೂ ಅಧಿಕಾರಿಗಳು ಬಿಂಬಿಸುವ ಮೂಲಕ ಪ್ರಚಾರ ಪಡೆದುಕೊಂಡರು. ಆರಂಭದಲ್ಲಿ ಕೇವಲ 10-15 ದಿನ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಶೌಚಾಲಯಗಳು, ನಂತರ ನಿರ್ವಹಣೆಯ ಕೊರತೆಯಿಂದ ಹಾಳಾಗಿವೆ.
ಶೌಚಾಲಯ ಬಳಕೆಗೆ ಬೇಕಾದ ನೀರು ಸರಬರಾಜು, ಸ್ವಚ್ಛತೆ ಹಾಗೂ ಯಂತ್ರಗಳ ತಪಾಸಣೆಯಂತಹ ಕೆಲಸವನ್ನೇ ಮಾಡಿಲ್ಲ. ಪರಿಣಾಮ ಕಳೆದ ಒಂದೂವರೆ ವರ್ಷಗಳಿಂದ ಇ-ಶೌಚಾಲಯಗಳು ತಮ್ಮ ಮೂಲಕ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಸಾರ್ವಜನಿಕರು ಇ-ಶೌಚಾಲಯ ಅವ್ಯವಸ್ಥೆಯಿಂದಾಗಿ ಅದನ್ನು ಬಳಸುವುದಿರಲಿ, ಅದರ ಬಳಿ ಹೋಗಲು ಸಹ ಹಿಂಜರಿಯುವಂತಾಗಿದೆ ಎಂಬುದು ಅಲ್ಲಿನ ನಿವಾಸಿಗಳ ಅಳಲಾಗಿದೆ.
Kshetra Samachara
06/08/2021 07:38 pm