ಧಾರವಾಡ: ಕೋವಿಡ್ ಮೊದಲ ಹಾಗೂ ಎರಡನೇ ಅಲೆ ಪತ್ರಿಕೋದ್ಯಮದ ಮೇಲೆ ಕರಿಛಾಯೆ ಬೀರಿದೆ. ಅದೇಷ್ಟೋ ಪತ್ರಕರ್ತರ ಬದುಕು ಬೀದಿಗೆ ತಂದು ನಿಲ್ಲಿಸಿದೆ ಎಂದು ಪತ್ರಕರ್ತ ಗಣಪತಿ ಗಂಗೊಳ್ಳಿ ಕಳವಳ ವ್ಯಕ್ತಪಡಿಸಿದರು. ಧಾರವಾಡ ಜರ್ನಲಿಸ್ಟ್ ಗಿಲ್ಡ್ ಸಹಯೋಗದಲ್ಲಿ ಧಾರವಾಡದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅದೆಷ್ಟೋ ಪತ್ರಕರ್ತರು ಉದ್ಯೋಗ ಕಳೆದುಕೊಂಡರೆ, ಮತ್ತಷ್ಟು ಪತ್ರಕರ್ತರು ಜೀವ ಕಳೆದುಕೊಂಡಿದ್ದಾರೆ. ಸರ್ಕಾರ ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರು ಎಂದು ಘೋಷಿಸಿದರೂ, ಅದು ಘೋಷಣೆಗೆ ಸೀಮತವಾಗಿದೆ. ಸೌಲಭ್ಯಗಳನ್ನು ನೀಡಿಲ್ಲ ಎಂದು ಬೇಸರಿಸಿದರು.
ಸ್ವಾತಂತ್ರ್ಯ ನಂತರ 1975 ರ ತುರ್ತು ಪರಿಸ್ಥಿತಿಯಲ್ಲಿ ಅಂದು ಪತ್ರಿಕೋದ್ಯಮ ನಿಷ್ಠೆ, ಬದ್ಧತೆ ಇತ್ತು. ಇಂದು ಇದೆಲ್ಲವೂ ಗೌಣವಾಗಿದೆ. ದೃಶ್ಯ ಮಾಧ್ಯಮ ಹಾಗೂ ಜಾಲತಾಣಗಳ ಹಾವಳಿ ಮುಂದುವರೆದರೆ, ಮುದ್ರಣ ಮಾಧ್ಯಮದ ಸ್ಥಿತಿ ಚಿಂತಾಜನಕ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪತ್ರಕರ್ತೆ ಎಸ್.ರಶ್ಮಿ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಗಿಲ್ಡ್ ಗೌರವಾಧ್ಯಕ್ಷ ಬಸವರಾಜ ಹೊಂಗಲ, ವೃತ್ತಿ ಜೊತೆಗೆ ಸಾರ್ವಜನಿಕ ವಿಷಯ ಕಲಿಯುವುದು ಅಗತ್ಯ. ಕೊರೊನಾ ಮಧ್ಯೆ ಪತ್ರಿಕೋದ್ಯಮ ಸ್ಥಿತಿ ದಯನೀಯವಾಗಿದೆ. ಇಂತಹ ಸಂದಿಗ್ಧತೆಯಲ್ಲಿ ಗಿಲ್ಡ್ ಜನ್ಮ ತಾಳಿ, ಉತ್ತಮ ಕೆಲಸ ಮಾಡುತ್ತಿದೆ ಎಂದರು.
Kshetra Samachara
31/07/2021 11:07 pm