ಹುಬ್ಬಳ್ಳಿ: ಜನರನ್ನು ರಂಜಿಸಬೇಕಿದ್ದ ಯೋಜನೆಗೆ ಕೋಟಿ ಕೋಟಿ ಹಣ ಸುರಿಯಲಾಗಿದೆ. ಆದರೆ ಇದುವರೆಗೂ ಕಾಮಗಾರಿ ಮಾತ್ರ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸ್ಮಾರ್ಟ್ ಕಾಮಗಾರಿಯಿಂದ ಜನರಿಗೆ ಸ್ಮಾರ್ಟ್ ಅನುಭವ ನೀಡಬೇಕಿದ್ದ ಯೋಜನೆಯೊಂದು ಆಮೆಗತಿಯ ವೇಗ ಪಡೆದುಕೊಂಡಿದ್ದಾರು ಎಲ್ಲಿ? ಯಾವುದು ಆ ಯೋಜನೆ ಅಂತಿರಾ ಈ ವರದಿ ನೋಡಿ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ ಹೂಬಳ್ಳಿ ಅಂತಾನೆ ಫೇಮಸ್. ಆದರೆ ಹೂವಿನ ಬಳ್ಳಿಯಂತೆ ನಗರ ಮಾತ್ರ ಅಂಧವಾಗಿಲ್ಲ. ನಗರಕ್ಕೆ ಸ್ಮಾರ್ಟ್ ಟಚ್ ಕೊಡುವ ನಿಟ್ಟಿನಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಹಲವಾರು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಕಾಮಗಾರಿಗಳು ಮಾತ್ರ ಆಮೆಗತಿಯ ವೇಗ ಪಡೆದುಕೊಂಡಿದೆ. ನಗರದ ಹೃದಯ ಭಾಗದಲ್ಲಿರುವ ಇಂದಿರಾ ಗಾಜಿನ ಮನೆಯಲ್ಲಿ ಸಂಗೀತ ಕಾರಂಜಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 4 ಕೋಟಿ 61 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಂಗೀತ ಕಾರಂಜಿಯ ಕಾಮಗಾರಿ ಇನ್ನೂ ಮುಗಿಯುತ್ತಿಲ್ಲ.
ಅವಳಿ ನಗರದ ಇತಿಹಾಸ ಹೇಳುವ ಈ ಸಂಗೀತ ಕಾರಂಜಿ ರಾಜ್ಯದ ಮೊದಲ ಸಂಗೀತ ಕಾರಂಜಿಯಾಗಬೇಕಿತ್ತು. ಆದರೆ ಇದುವರೆಗೆ ಇಲ್ಲಿ ಸಂಗೀತದ ಬಣ್ಣ ಬಣ್ಣದ ಕಾರಂಜಿಗಳು ಬಾನೆತ್ತರಕ್ಕೆ ಬಳಕುತ್ತ ಚಿಮ್ಮುತ್ತಿಲ್ಲ. ಹೂಬಳ್ಳಿಯಂತೆ ಬಳಕುತ್ತಾ ಕಾರಂಜಿ ಚಿಮ್ಮುವ ಮೂಲಕ ಜನಮನಸೂರೆಗೊಳ್ಳಬೇಕಿತ್ತು. ಪ್ರೇಕ್ಷಕರ ಮನಸ್ಸಿಗೆ ಇಂಪು ನೀಡಬೇಕಿತ್ತು. ಬೆಂಗಳೂರಿನ ಬಿಎನ್ ಎ ಟೆಕ್ನಾಲಜಿ ಸಂಸ್ಥೆ ಸಹಯೋಗದೊಂದಿಗೆ ನಡೆಯುತ್ತಿರುವ ಈ ಕಾಮಗಾರಿ ಮುಗಿಯುವ ಲಕ್ಷಣ ಕಾಣದಿರುವುದಕ್ಕೆ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕಾಮಗಾರಿಗಳನ್ನ ತ್ವರಿತವಾಗಿ ಮುಗಿಸಬೇಕಿದ್ದ ಅಧಿಕಾರಿಗಳು ಮಾತ್ರ ಕೋವಿಡ್ ನೆಪ ಮಾಡಿಕೊಂಡು ಅಭಿವೃದ್ಧಿಗೆ ವೇಗ ಹೆಚ್ಚಿಸುತ್ತಿಲ್ಲ. ನಗರಾಭಿವೃದ್ಧಿ ಸಚಿವರು ಇಂದಿರಾ ಗಾಜಿನ ಮನೆಗೆ ಭೇಟಿ ನೀಡಿ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು ಪ್ರಯೋಜನವಾಗಲಿಲ್ಲ. ಸಂಗೀತ ಕಾರಂಜಿ ಜೊತೆಗೆ 4.50 ಕೋಟಿ ವೆಚ್ಚದಲ್ಲಿ ಪುಟಾಣಿ ಟ್ರೇನ್, ಸ್ಕೇಟಿಂಗ್ ಮೈದಾನ ಸೇರಿದಂತೆ ಇಂದಿರಾಗಾಜಿನ ಮನೆಯಲ್ಲಿ 22 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಒಂದೆ ಒಂದು ಕಾಮಗಾರಿಯು ಮುಗದಿಲ್ಲ. ಇಲ್ಲಿಯ ಉದ್ಯಾನವನದಲ್ಲಿ ಆಟವಾಡಲು ಹೋದ ಮಕ್ಕಳು ಗುಂಡಿಗಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದ್ಯಾವುದಕ್ಕು ಖ್ಯಾರೆ ಎನ್ನದ ಅಧಿಕಾರಿಗಳು ಮಾತ್ರ ಇನ್ನೊಂದು ತಿಂಗಳಲ್ಲಿ ಕಾಮಗಾರಿ ಮುಗಿಯುತ್ತೆ ಎಂದು ಸುಳ್ಳು ಹೇಳುತ್ತಾ ಹೊರಟಿದ್ದಾರೆ.
ನಗರದ ಅಂದ ಹೆಚ್ಚಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ನಗರದ ಜನತೆಗೆ ಅಸಮಾಧಾನವಾಗಿದೆ. ಸ್ಮಾರ್ಟ್ ಟಚ್ ಕೊಡೊದು ಹೋಗಲಿ ಕಾಮಗಾರಿಗಳು ಸರಿಯಾದ ಸಮಯಕ್ಕೆ ಮುಗಿಯದೆ ಜನರ ಜೀವ ಹಿಂಡುತ್ತಿರುವುದಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೋಟಿ ಕೋಟಿ ವೆಚ್ಚವಾದರೂ ಇಂದಿರಾ ಗ್ಲಾಸ್ ಹೌಸ್ ನಲ್ಲಿ ಸಂಗಿತಾ ಕಾರಂಜಿ ಚಿಮ್ಮುವುದು ಅದ್ಯಾವಾಗಲೊ ಕಾದು ನೋಡಬೇಕಿದೆ.
Kshetra Samachara
19/02/2021 06:20 pm