ಧಾರವಾಡ: ನಮಸ್ಕಾರೀ ಧಾರವಾಡ ಮಂದಿಗೆ.. ಇಲ್ನೋಡ್ರಿ ಇದು ನಾವ್ ಏನ್ ನಿಮಗ ನಿನ್ನೆ ತೋರಿಸಿದ್ದಿವಲ್ರಿ ಅದೇ ರಸ್ತೆ ನೋಡ್ರಿ ಇದು. ಯಾವ ರಸ್ತೆ ರೀ ಪಾ ಅಂತೀರೇನು? ಅದ ರೀ ರಾಜ್ಯ ಹೆದ್ದಾರಿ ಅಂತಾ ಕರಿಸಿಕೊಳ್ಳತೈತಲ್ರಿ ಧಾರವಾಡದಿಂದ ವಾಯಾ ಉಪ್ಪಿನ ಬೆಟಗೇರಿಗೆ ಹೋಗು ರಸ್ತೆ ಇದು.
ರಸ್ತೆದಾಗಿನ ಗುಂಡಿ ಮುಚ್ಚಾಕ ಅಂತ ಹೇಳಿ ಈ ರಸ್ತೆಕ್ಕ 10 ಲಕ್ಷ ರೂಪಾಯಿ ಬಂದಿತ್ತು ಅಂತ ಗೊತ್ತಾಗೈತಿ. ಆದ್ರ ಇದರ ಗುತ್ತಿಗೆ ಪಡೆದ ಮಾಲೀಕ ಕೇವಲ 5 ಲಕ್ಷ ರೂಪಾಯಿದ ಮಾತ್ರ ಗುತ್ತಿಗೆ ಪಡಕೊಂಡು ಹಂಡ ಬಂಡ ಕೆಲಸಾ ಮಾಡಿ ಹೋಗ್ಯಾರ್.
ಇಲ್ರಿ ನಮಗ ಗುಂಡಿ ಮುಚ್ಚಾಕಂತ 5 ಲಕ್ಷ ಬಂದಿತ್ತು. ಹಿಂಗಾಗಿ ಗುಂಡಿ ಅಷ್ಟ ಮುಚ್ಚೇವಿ ಅಂತಾ ಹೇಳೋ ನಮ್ಮ ಪಿಡಬ್ಲುಡಿ ಎಂಜಿನಿಯರ್ ಸಾಹೇಬ್ರಿಗೆ ನರೇಂದ್ರ ಕ್ರಾಸ್ ಕಡೆ ಮುಚ್ಚದೇನೆ ಬಿಟ್ಟಿರೋ ಗುಂಡಿಗಳು ಕಂಡಿಲ್ಲೋ ಏನೋ,
ಆ ಗುಂಡಿ ಮುಚ್ಚಾಕಂತ ಅದಕ್ಕ ಜಲ್ಲಿಕಲ್ಲು ಹಾಕಿ ಕೈ ಬಿಟ್ಟಾರ. ಆದ್ರ ಅದಕ್ಕ ಡಾಂಬರ್ ಹಾಕಿ ಪ್ಯಾಚ್ ವರ್ಕ ಮಾಡಿಲ್ಲ. ಇದನ್ನ ನಮ್ಮ ಎಂಜಿನಿಯರ್ ಸಾಹೇಬ್ರನ್ನ ಕೇಳಿದ್ರ ಮುಂದಿನ ವಾರದಾಗ ಆ ಗುಂಡಿ ಮುಚ್ಚೋ ಕೆಲಸಾ ಮಾಡಸ್ತೇವ್ರಿ ಅಂತಾರ. ಅಲ್ರಿ. ಈ ಗುಂಡಿ ಮುಚ್ಚಾಕ ಅಂತ ಹೇಳೇನ ಒಬ್ರು ಕಾಂಟ್ರ್ಯಾಕ್ಟ್ ತುಗೊಂಡು ಕೆಲಸಾ ಮಾಡಿಸ್ಯಾರ. ಆದ್ರ ಈ ಕೆಲಸಾ ಅವ್ರಿಗೆ ಬರೋದಿಲ್ಲ ಅಂದ್ರ ಹೆಂಗರೀ.
10 ಲಕ್ಷ ಅನುದಾನ ಬಂದಿತ್ತು ಅಂತಾ ಅವ್ರು ಏನ್ ಹೇಳ್ಯಾರಲ್ಲ. ಅದರಾಗ ಗುತ್ತಿಗೆದಾರ 5 ಲಕ್ಷ ರೂಪಾಯಿದ್ದಷ್ಟ ಗುತ್ತಿಗೆ ಪಡದಿದ್ದಂತ. ಉಳಿದ ರೊಕ್ಕಾ ಸರ್ಕಾರಕ್ಕೆ ಹೋಗೇತಂತ. ಅಲ್ರಿ ಇವ್ರು ಯಾರ ಕಿವ್ಯಾಗ ಆಜಾದ್ ಪಾರ್ಕ ಇಡಾಕ ಹೊಂಟಾರೋ ಏನೋ?
ಸರ್ಕಾರದಿಂದ ಬಂದ ಅನುದಾನ ಸರಿಯಾಗಿ ಬಳಕೆ ಮಾಡಿಕೊಳ್ಳದ ಹಂಗ ಆಗೇತ್ರಿ ಹಿಂಗ ಆಗೇತ್ರಿ ಅಂತ ಹಾರಿಕಿ ಉತ್ತರಾ ಕೊಡಾಕತ್ತಾರ ನಮ್ಮ ಅಧಿಕಾರಿಗಳು. ಉಳಿದ 5 ಲಕ್ಷ ರೂಪಾಯಿಗೆ ಮತ್ತೊಂದ ಟೆಂಡರ್ ಕರದು ರಸ್ತೆ ಪೂರ್ತಿ ರಿಪೇರಿ ಮಾಡಸಬಹುದಿತ್ತು. ಹಿಂಗ ಆದ್ರ ದೇಶ ಯಾವಾಗ ಉದ್ದಾರ ಆಗುದೋ ಏನೋ?
Kshetra Samachara
04/02/2021 09:00 pm