ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂತ್ರಿಗಳೇ ನಿಮ್ಮ ವಿಳಂಬ ನೀತಿಗೆ ಇನ್ನೆಷ್ಟು ಜೀವಗಳು ಬಲಿಯಾಗ ಬೇಕು?

ಪಬ್ಲಿಕ್ ನೆಕ್ಸ್ಟ್ ಕಳಕಳಿ : ಕೇಶವ ನಾಡಕರ್ಣಿ

ಹುಬ್ಬಳ್ಳಿ : ಈಗಾಗಲೇ 1೦೦ ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಬೈಪಾಸ್ ರಸ್ತೆ ನಿಜಕ್ಕೂ ಸಾವಿಗೆ ರಹದಾರಿಯಾಗಿದೆ. ಸಂಕ್ರಮಣ ಮರುದಿನವೇ 13 ಅಮಾಯಕ ಜೀವಗಳು ಗುರುತು ಪತ್ತೆಯಾಗದ ರೀತಿಯಲ್ಲಿ ಸಾವನ್ನಪ್ಪಿದವು. ಬದುಕಿನ ಬಗೆ ಬಗೆಯ ಕನಸುಗಳನ್ನು ಕಾಣುತ್ತ ಸುಖ ನಿದ್ರೆಯಲ್ಲಿದ್ದವರು ಕ್ಷಣ ಮಾತ್ರದಲ್ಲಿ ಚಿರನಿದ್ರೆಗೆ ಜಾರಿದರು.

ಇದಕ್ಕೆ ಯಾರು ಹೊಣೆ? ರಾಜ್ಯ ಹಾಗೂ ಕೇಂದ್ರ ಸರಕಾರಗಳ ಬೇಜವಾಬ್ದಾರಿ ಹಾಗೂ ವಿಳಂಬ ನೀತಿ. ಈ ರಸ್ತೆ ನಿರ್ಮಿಸಿರುವ ನಂದಿ ಹೈವೇ ಡೆವಲಪರ್ಸ್ ಕಂಪನಿ ಹಾಗೂ ಸರಕಾರಗಳ ನಡುವಿನ ಒಪ್ಪಂದ 2024 ರವರೆಗೆ ಇದ್ದು ಅದು ಮುಗಿಯುವವರೆಗೆ ಹುಬ್ಬಳ್ಳಿ ಗಬ್ಬೂರಿನಿಂದ ಧಾರವಾಡವರೆಗಿನ 30 ಕಿಮಿ ಬೈಪಾಸ್ ರಸ್ತೆ ವಿಸ್ತರಣೆ ಕಾರ್ಯ ಸಾಧ್ಯವಿಲ್ಲ. ಹಾಗಾದರೆ ಇನ್ನೂ ಮೂರು ವರ್ಷ ಅದೆಷ್ಟು ಅನಾಹುತಗಳು ಕಾದಿವೆಯೋ ದೇವರೇ ಬಲ್ಲ.

ಸ್ವರ್ಣ ಚುತುಷ್ಪಥ ರಾಷ್ಟ್ರೀಯ ಹೆದ್ದಾರಿಗಳು 6 ಲೇನ್ ಗಳಾಗಿ ಮೇಲ್ದರ್ಜೆಗೇರುತ್ತಿದ್ದರೂ, ನಂದಿ ಕಂಪನಿ ನಡುವಿನ ಒಪ್ಪಂದದಿಂದಾಗಿ ಈ 30 ಕಿ.ಮಿ ಹೆದ್ದಾರಿ ವಿಸ್ತರಣೆ ಅಸಾಧ್ಯವಾಗಿದೆ. 1998 ರಲ್ಲಿಯೇ ಆರಂಭವಾಗಿದ್ದ ಗಬ್ಬೂರ - ಹುಬ್ಬಳ್ಳಿ - ಧಾರವಾಡ ನಡುವಿನ ಹೆದ್ದಾರಿ ಇದೇ ಕಾರಣಕ್ಕೆ ಇನ್ನೂ ಕೇವಲ ದ್ವಿಪಥವಾಗಿಯೇ ಉಳಿದಿದೆ.

ನಿತ್ಯ ಸಾವಿರ ಸಾವಿರ ವಾಹನಗಳು ಸಂಚರಿಸುತ್ತಿರುವುದರಿಂದ ಇದು ಪ್ರಮುಖ ಹೆದ್ದಾರಿಯಾಗಿದೆ. ರಸ್ತೆ ಕಿರಿದಾಗಿರುವುದರಿಂದ ಇಲ್ಲಿ ವಾಹನಗಳು ನಿಧಾನ ಸಂಚರಿಸಲೇ ಬೇಕಾಗಿದೆ. ಇನ್ನುಳಿದ ಹೆದ್ದಾರಿಗಳಲ್ಲಿ ಅತಿ ವೇಗವಾಗಿ ಚಲಿಸುವ ವಾಹಗಳಿಗೆ ಇಲ್ಲಿ ಕಿರಿದಾದ ರಸ್ತೆಯಿದೆ ಎಂಬುದರ ಅರಿವು ಕಡಿಮೆ. ಹೀಗಾಗಿ ಓವರ್ ಟೇಕ್ ಮಾಡುವಾಗ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಬಹುದು.

ಹಾಲಿ ಇರುವ ನಂದಿ ಕಂಪನಿ ಒಪ್ಪಿಗೆ ನೀಡಿದಲ್ಲಿ ಅಥವಾ ಅವರಿಗೆ ಲಾಭದ ಹಣವನ್ನು ಸಂದಾಯ ಮಾಡಿದಲ್ಲಿ ಗಬ್ಬೂರ - ಧಾರವಾಡ ನಡುವಿನ ರಸ್ತೆಯನ್ನು 6 ಮಾರ್ಗಗಳಿಗೆ ವಿಸ್ತರಿಸಬಹುದು. ಇದಕ್ಕೆ ಪರ್ಯಾಯ ಮಾರ್ಗ ಹುಡುಕಲು ರಾಜ್ಯ ಸರಕಾರ ಏಜನ್ಸಿಯೊಂದನ್ನು ನೇಮಕ ಮಾಡಿದೆ. ಅದರ ಶಿಫಾರಸಿನ ಮೇರೆಗೆ ರಾಜ್ಯ ಸರಕಾರ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿ ಅಲ್ಲಿಂದ ಹಣ ಪಡೆಯಬಹುದು ಎಂದು ಹೇಳುತ್ತಾರೆ ಈ ಭಾಗದ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ತನಗೆ ಬರಬೇಕಾದ ಹಣ ನೀಡಿದರೆ ರಸ್ತೆ ಬಿಟ್ಟು ಕೊಡುವದಾಗಿ ನಂದಿ ಡೆವಲಪರ್ಸ್ ಕಂಪನಿ ಹೇಳಿದೆಯಂತೆ. ಸಚಿವ ಪ್ರಹ್ಲಾದ್ ಜೋಶಿ ಅವರೆ ಹಣ ಬಿಡುಗಡೆಗೆ ಮಾಡಿಸಲು ಇರುವ ಅಡ್ಡಿಯಾದರೂ ಏನು? ರಾಜ್ಯದಲ್ಲಿ ನಿಮ್ಮದೇ ಸರಕಾರವಿದೆ. ಕೇಂದ್ರದಲ್ಲಿ ತಾವು ಅತ್ಯಂತ ಪ್ರಭಾವಿ ಸಚಿವರಾಗಿದ್ದೀರಿ ತಾವು ಪ್ರಯತ್ನಸಿದರೆ ಇದೇನು ಅಸಾಧ್ಯವೇನಿಲ್ಲ. ಕಂಪನಿಗೆ ನೀಡಬೇಕಾದ ಕೆಲವು ಕೋಟಿ ರೂ ಪರಿಹಾರ ಈ 13 ಅಮೂಲ್ಯ ಜೀವಗಳಿಗಿಂತ ದೊಡ್ಡದೇನಲ್ಲ.

ಚೆನ್ನಮ್ಮ ಸರ್ಕಲ್ ಫ್ಲೈ ಓವರ್ ನಿರ್ಮಾಣಕ್ಕೆ ತೋರಿರುವ ಉತ್ಸಾಹ ಇಲ್ಲೇಕೆ ಇಲ್ಲ? ನಿನ್ನೆ ನಡೆದ ದುರಂತಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಶೋಕ ವ್ಯಕ್ತಪಡಿಸಿ ಆಯಾ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈಗಲಾದರೂ ಕೇಂದ್ರ ಸಚಿವ ನಿತೀನ್ ಗಡ್ಕರಿ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬಹುದಲ್ಲವೆ?

ಮುಖ್ಯಮಂತ್ರಿ ಯಡಿಯೂರಪ್ಪನವರೆ ನಿಮ್ಮ ಆಪತ್ಭಾಂದವರಿಗೆ ಮಂತ್ರಿಗಿರಿ ಕೊಡಿಸಿದ್ದಾಯ್ತು. ಇನ್ನೆರಡು ವರ್ಷ ನಿಮ್ಮ ಕುರ್ಚಿ ಗಟ್ಟಿಯಾಗಿದೆ. ಇನ್ನಾದರೂ ಇಂತಹ ದುರ್ಘಟನೆಗಳ ಬಗ್ಗೆ ಕಣ್ಣು ತೆರೆದು ನೋಡಿ. ಅದೇನು ಮಾಡಬೇಕೋ ಮಾಡಿ ಗುತ್ತಿಗೆದಾರರಿಗೆ ಹಣ ಕೊಡಿಸಿ ರಸ್ತೆ ವಿಸ್ತರಣೆ ಕಾರ್ಯ ಆರಂಭವಾಗುವಂತೆ ನೋಡಿಕೊಳ್ಳಿ. ನಿಮಗೆ ಗೊತ್ತೆ? 2017 ರ ಒಂದೇ ವರ್ಷದಲ್ಲಿ 100 ಕ್ಕೂ ಹೆಚ್ಚು ಜನ ಇದೇ ರಸ್ತೆಯಲ್ಲಿ ಪ್ರಾಣಕಳೆದುಕೊಂಡಿದ್ದಾರೆ.

Edited By :
Kshetra Samachara

Kshetra Samachara

16/01/2021 12:45 pm

Cinque Terre

81.13 K

Cinque Terre

43

ಸಂಬಂಧಿತ ಸುದ್ದಿ