ಹುಬ್ಬಳ್ಳಿ: ನೈರುತ್ಯ ರೈಲ್ವೆ ತನ್ನ ಸೇವಾ ಕಟ್ಟಡಗಳು, 120 ನಿಲ್ದಾಣಗಳು, ಲೆವೆಲ್ ಕ್ರಾಸಿಂಗ್ ಗೇಟ್‌ಗಳು ಸೇರಿದಂತೆ ವಿವಿಧೆಡೆ ಅಳವಡಿಸಿರುವ 4656.60 ಕಿಲೋವಾಟ್ ಸಾಮರ್ಥ್ಯದ ಸೌರಫಲಕಗಳಿಂದ ಕಳೆದ ಆರ್ಥಿಕ ವರ್ಷದಲ್ಲಿ 46.11 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದು, ಇದರಿಂದಾಗಿ ರೈಲ್ವೆಗೆ ವಿದ್ಯುತ್ ಬಿಲ್‌ನಲ್ಲಿ 1.96 ಕೋಟಿ ರೂ. ಉಳಿತಾಯವಾಗಿದೆ!
ಹುಬ್ಬಳ್ಳಿ ನಿಲ್ದಾಣದ ಒಟ್ಟಾರೆ ವಿದ್ಯುತ್ ಅಗತ್ಯತೆಯ ಶೇ. 70ರಷ್ಟು ಸೌರಶಕ್ತಿಯಿಂದಲೇ ಪೂರೈಕೆಯಾಗಿದೆ. ಕಾರ್ಯಾಗಾರದ ಶೇ. 83ರಷ್ಟು ವಿದ್ಯುತ್ (ಒಟ್ಟು ವಿದ್ಯುತ್ ಅಗತ್ಯ 13.51 ಲಕ್ಷ ಯುನಿಟ್) ಹಾಗೂ ಇಎಂಡಿ ಶೆಡ್‌ನ ವಾರ್ಷಿಕ 1.13 ಲಕ್ಷ ಯುನಿಟ್‌ಗಳ ವಿದ್ಯುತ್ ಬಳಕೆಯ ಪೈಕಿ ಶೇ. 60ರಷ್ಟು ವಿದ್ಯುತ್ ಸೌರಶಕ್ತಿಯಿಂದ ಪಡೆದುಕೊಳ್ಳಲಾಗಿದೆ ಎಂದು ರೈಲ್ವೆ ತಿಳಿಸಿದೆ.
ರೈಲ್ ಸೌಧದಲ್ಲಿ ಅಳವಡಿಸಲಾಗಿರುವ ಸೌರಫಲಕಗಳಿಂದ 2.75 ಲಕ್ಷ ಯುನಿಟ್ ವಿದ್ಯುತ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ 84,294 ಯುನಿಟ್, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ 94,115 ಯುನಿಟ್ ಹಾಗೂ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ ಅಳವಡಿಸಿರುವ ಸೌರಫಲಕಗಳಿಂದ 1.28 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆಯ ಇನ್ನೂ 26 ನಿಲ್ದಾಣಗಳಲ್ಲಿ ಸೌರಫಲಕಗಳನ್ನು ಅಳವಡಿಸಲಾಗುವುದು. ನೈರುತ್ಯ ರೈಲ್ವೆಯು ಪರಿಸರ ಸ್ನೇಹಿ ಸೌರಶಕ್ತಿಯನ್ನು ಬಳಸಿಕೊಳ್ಳುತ್ತಿದ್ದು 2030ರೊಳಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವ ರೈಲ್ವೆಯಾಗಿ ಹೊರಹೊಮ್ಮುವ ಗುರಿ ಹೊಂದಿದೆ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹೇಳಿದ್ದಾರೆ.
Kshetra Samachara
10/05/2022 12:43 pm