ಹುಬ್ಬಳ್ಳಿ: ಅದು ಹುಬ್ಬಳ್ಳಿಯ ಐತಿಹಾಸಿಕ ತಾಣಗಳಲ್ಲಿ ಒಂದು. ಹುಬ್ಬಳ್ಳಿಯಿಂದ 4 ಕಿಲೋ ಮೀಟರ್ ದೂರದಲ್ಲಿರುವ ಆ ಐತಿಹಾಸಿಕ ತಾಣಕ್ಕೆ ಬೇಕಿದೆ ಕಾಯಕಲ್ಪ. ಸುಮಾರು ಪ್ರವಾಸಿಗಳ ಆಕರ್ಷಕ ತಾಣವಾಗಿರುವ ಈ ಸ್ಥಳ ಮಾತ್ರ ಇನ್ನೂ ಅಭಿವೃದ್ಧಿ ಆಗಿಲ್ಲ. ಅಷ್ಟಕ್ಕೂ ಯಾವುದು ಆ ಐತಿಹಾಸಿಕ ತಾಣ ಅಂತೀರಾ ಈ ಸ್ಟೋರಿ ನೋಡಿ..
ಹೌದು..ಹುಬ್ಬಳ್ಳಿಯ ಉಣಕಲ್ ಗ್ರಾಮದಲ್ಲಿರುವ ಚಂದ್ರಮೌಳೀಶ್ವರ ದೇವಾಲಯ. ಚಾಲುಕ್ಯರ ಶೈಲಿಯಲ್ಲಿ ಕಟ್ಟಿದ ಕಲ್ಲಿನ ದೇವಾಲಯ. ಇದು ಸುಮಾರು 900 ವರ್ಷ ಪುರಾತನವಾಗಿದ್ದು, ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಇದನ್ನು ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ದೇವಾಲಯಗಳ ಮಾದರಿಯಲ್ಲಿ ಕಟ್ಟಲಾಗಿದೆ. ಇದೊಂದು ರಾಷ್ಟ್ರೀಯ ಪ್ರಾಮುಖ್ಯ ಹೊಂದಿರುವ ಸ್ಮಾರಕವಾಗಿದ್ದು ಇದನ್ನು ಭಾರತೀಯ ಪುರಾತತ್ವ ಇಲಾಖೆಯು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ. ಆದರೂ ಕೂಡ ಈಗ ಸರಿಯಾದ ಕಾಯಕಲ್ಪವಿಲ್ಲದೇ ಅಭಿವೃದ್ಧಿಯಿಂದ ವಂಚಿತವಾಗಿದೆ.
ಇನ್ನು ದೇವಾಲದ ವಿಶೇಷತೆಯೆಂದರೆ ನಂದಿಯ ಎರಡು ವಿಗ್ರಹಗಳಿವೆ. ದೇವಾಲಯದ ನಡುವೆ ಗರ್ಭಗುಡಿಯಿದ್ದು ಈ ಗರ್ಭಗುಡಿಗೆ ನಾಲ್ಕು ಬಾಗಿಲುಗಳಿವೆ. ಈ ಬಾಗಿಲುಗಳ ಮೇಲೆ ಮತ್ತು ಕೆಳಗೆ ಸುಂದರ ಕೆತ್ತನೆಗಳಿವೆ. ದೇವಾಲಯದ ಜಾಲಂಧರಗಳಲ್ಲಿ, ಗೋಡೆಗಳಲ್ಲಿ, ಹೊರಭಾಗದಲ್ಲಿ ಎಲ್ಲ ಕಡೆ ಸುಂದರ ಕೆತ್ತನೆಗಳಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ಅನುದಾನ ಬಿಡುಗಡೆ ಮಾಡಿ ಐತಿಹಾಸಿಕ ತಾಣವನ್ನು ಮತ್ತಷ್ಟು ಅಭಿವೃದ್ಧಿ ಮಾಡಬೇಕಿದೆ.
Kshetra Samachara
26/05/2022 07:27 pm