ಹುಬ್ಬಳ್ಳಿ: ಕೆರೆ ಸೌಂದರ್ಯೀಕರಣದ ಜತೆಗೆ ಜಲ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಕೆರೆ ನಿಸರ್ಗ ಸೊಬಗು ಸವಿಯಲು ಬರುವವರು ಇನ್ನು ಮುಂದೆ ಜಲಕ್ರೀಡೆಗಳ ಆನಂದವನ್ನೂ ಅನುಭವಿಸಬಹುದಾಗಿದೆ. ಸ್ಮಾರ್ಟ್ಸಿಟಿ ಯೋಜನೆಯಡಿ ರೂಪಿಸಿದ ಈ ಯೋಜನೆ ಮುಂದಿನ ಎರಡು ತಿಂಗಳಲ್ಲಿ ಸಾರ್ವಜನಿಕರ ಬಳಕೆಗೆ ಸಿದ್ದವಾಗಲಿದೆ.
ಹುಬ್ಬಳ್ಳಿಯ ತೋಳನಕೆರೆ ಹಾಗೂ ಐತಿಹಾಸಿಕ ಉಣಕಲ್ ಕೆರೆಯಲ್ಲಿ ಬೋಟಿಂಗ್, ಬೋಟ್ ಸ್ಟ್ಯಾಂಡ್ ಹಾಗೂ ಲೈಫ್ ಜಾಕೆಟ್ ಸಂಗ್ರಹ ಕೊಠಡಿ ಸೇರಿದಂತೆ ಜಲಕ್ರೀಡೆಗೆ ಅಗತ್ಯವಿರುವ ಎಲ್ಲ ಸೌಕರ್ಯವನ್ನು ಕಲ್ಪಿಸುವ ಕೆಲಸ ಭರದಿಂದ ಸಾಗಿದೆ.ಎರಡೂ ಕೆರೆಗಳಲ್ಲಿ ಜಲಕ್ರೀಡೆಗಳ ಕಲರವ ಹಾಗೂ ಪೆಡ್ಲಿಂಗ್ ಬೋಟ್ ಕಾಣುವಂತಾಗಲಿದ್ದು, ಇದು ಅವಳಿ ನಗರದವರಿಗಷ್ಟೇ ಅಲ್ಲ. ಉತ್ತರ ಕರ್ನಾಟಕದವರ ಆಕರ್ಷಣೀಯ ಕೇಂದ್ರವೂ ಆಗಲಿದೆ. ಕೆರೆಗಳ ಅಭಿವೃದ್ಧಿಗೆ ಈಗಾಗಲೇ ಸ್ಮಾರ್ಟ್ಸಿಟಿ ಯೋಜನೆಯಡಿ ಕೋಟ್ಯಾಂತರ ರೂ. ಮೀಸಲಿಡಲಾಗಿದ್ದು, ಅದರಿಂದ ಕೆರೆಗಳು ಮತ್ತಷ್ಟು ಸ್ಮಾರ್ಟ್ ಆಗುವ ಜೊತೆಗೆ ಮನರಂಜನೆ ನೀಡುವ ಜಲಕ್ರೀಡಾ ಸ್ಥಳಗಳಾಗಲಿವೆ.
ನಗರದ ತೋಳನಕೆರೆ ಹಾಗೂ ಉಣಕಲ್ ಕೆರೆಯಲ್ಲಿ ಅವಳಿ ನಗರದ ಜನತೆಯನ್ನು ಆಕರ್ಷಿಸುವ ಕ್ರೀಡೆಗಳಿಗೆ ಆದ್ಯತೆ ನೀಡಲಾಗಿದೆ.ಅದರಂತೆ ಕೆರೆಯಲ್ಲಿ ಇನ್ನುಮುಂದೆ ವಾಟರ್ ಜೆಟ್, ಫ್ಲೋಟಿಂಗ್ ಜೆಟ್, ವಿಂಡ್ ಸರ್ಫಿಂಗ್ ಹಾಗೂ ವಾಯುವಿಹಾರಿಗಳಿಗೆ ಕೆರೆಯ ಸಂಪೂರ್ಣ ಸೌಂದರ್ಯ ಸವಿಯಲು ಪೆಡಲ್ ಬೋಟಿಂಗ್ ಸಹ ಇರಲಿವೆ. ಕೇವಲ ಕೆರೆಯ ನೀರಿನ ಸೌಂದರ್ಯವನ್ನು ಹೊರ ನಿಂತು ಆಸ್ವಾದಿಸುತ್ತಿದ್ದವರು ಇನ್ನು ಮುಂದೆ ನೀರಿನಲ್ಲಿ ಇಳಿಯುವ ಮೂಲಕ ಮತ್ತಷ್ಟು ಮನರಂಜನೆ ಪಡೆಯಲು ಅನುಕೂಲ ಕಲ್ಪಿಸಲಾಗುತ್ತಿದೆ.
ತೋಳನಕೆರೆಯಲ್ಲಿ ಈಗಾಗಲೇ ಬೋಟಿಂಗ್ ಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿ ನಡೆಯುತ್ತಿದ್ದು, ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು.ಸ್ಮಾರ್ಟ್ಸಿಟಿ ಯೋಜನೆಯಲ್ಲಿಯಾದರೂ ನಗರದ ಕೆರೆಗಳೆರಡಕ್ಕೂ ಮತ್ತೆ ಕಳೆ ಬಂದಂತಾಗಿದ್ದು, ಜಲ ವಿಹಾರಿಗಳಿಗೆ ಜಲಕ್ರೀಡೆಯಲ್ಲಿ ಪಾಲ್ಗೊಳ್ಳುವ ಕನಸು ನನಸಾಗುವ ಹಂತದಲ್ಲಿದೆ. ಈ ಎರಡೂ ಯೋಜನೆಗಳು ಯಥಾವತ್ತಾಗಿ ಅನುಷ್ಠಾನಗೊಂಡರೆ, ಎರಡೂ ಕೆರೆಗಳು ಅವಳಿ ನಗರದ ಪಿಕ್ನಿಕ್ ಸ್ಪಾಟ್ಗಳಾಗಿ ಪರಿವರ್ತನೆಯಾಗಲಿವೆ.ಸ್ಮಾರ್ಟ್ ಸಿಟಿಯ ಈ ಯೋಜನೆ ಅವಳಿ ನಗರದ ಜನತೆಯಿಂದ ಯಾವ ರೀತಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.
Kshetra Samachara
16/02/2021 10:59 pm