ಅಣ್ಣಿಗೇರಿ: ರೈತ ದೇಶದ ಬೆನ್ನೆಲುಬು ಅನ್ನುತ್ತಾರೆ. ಆದರೆ ಈ ಸರ್ಕಾರ ಆ ರೈತನ ಬೆನ್ನೆಲುಬುಗಳನ್ನೇ ಮುರಿಯುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿ ಅಪಾರ ಬೆಳೆ ಹಾಳಾಗುತ್ತಿದ್ದರೂ, ರೈತ ಸಾಯುತ್ತಿದ್ದರೂ ಸರ್ಕಾರ ಮಾತ್ರ ಬೆಳೆ ಪರಿಹಾರ ನೀಡುತ್ತಿಲ್ಲ ಎಂದು ಭದ್ರಾಪುರ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಂಗಡಿ ಪಬ್ಲಿಕ್ ನೆಕ್ಸ್ಟ್‌ಗೆ ದೂರಿದರು.
ಇಂದು ಮುಂಜಾನೆ 7 ಗಂಟೆಯಿಂದಲೇ ಸುಮಾರು ಆರೇಳು ಕಿಲೋ ಮೀಟರ್‌ಗಳಷ್ಟು ರೈತರ ಜಮೀನುಗಳಲ್ಲಿ ಸಂಚರಿಸಿ ಮಾತನಾಡಿದ ಅವರು, ಭದ್ರಾಪುರ ಗ್ರಾಮದ ಹಳ್ಳದ ಸುತ್ತಮುತ್ತಲಿರುವ ರೈತರ ನಾಲ್ಕೈದು ನೂರು ಎಕರೆ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿ ಒಡ್ಡುಗಳು ಒಡೆದು ಹೋಗಿವೆ. ಹೀಗಿದ್ದರೂ ಪರಿಶೀಲನೆಗೆ ಯಾವ ಒಬ್ಬ ಅಧಿಕಾರಿ ಭೇಟಿ ನೀಡಿಲ್ಲ ಎಂದು ಹರಿಹಾಯ್ದರು.
ಅವೈಜ್ಞಾನಿಕವಾಗಿ ಹಳ್ಳದಲ್ಲಿ ಇರುವ ಚೆಕ್‌ಡ್ಯಾಮ್ ತಕ್ಷಣವೇ ನೆಲಸಮಗೊಳಿಸಬೇಕು ಹಾಗೂ ಸರ್ಕಾರ ವಿಶೇಷ ಅನುದಾನದ ಅಡಿಯಲ್ಲಿ ರೈತರಿಗೆ ಶೀಘ್ರದಲ್ಲಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಲ್ಲಪ್ಪ ಗುಡ್ಡದ ಎಂಬ ರೈತ ಕಣ್ಣೀರಿಟ್ಟು ಅಳಲು ತೋಡಿಕೊಂಡರು. ಆದಷ್ಟು ಬೇಗನೆ ರೈತರಿಗೆ ಪರಿಹಾರ ನೀಡಬೇಕೆಂದು ಪಬ್ಲಿಕ್ ನೆಕ್ಸ್ಟ್ ಕಡೆಯಿಂದ ಸರ್ಕಾರಕ್ಕೆ ವಿನಂತಿ.
ನಂದೀಶ್, ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
08/09/2022 02:57 pm