ಧಾರವಾಡ: ಧಾರವಾಡ ತಾಲೂಕಿನ ದಡ್ಡಿ ಕಮಲಾಪೂರ ಗ್ರಾಮದ ಪಕ್ಕದಲ್ಲೇ ಮುಸ್ಲಿಂ ಸಮಾಜದ ಸ್ಮಶಾನ ಇದೆ. ಇಷ್ಟು ದಿನ ಈ ಸ್ಮಶಾನದ ಜಾಗ ದಾಖಲೆಗಳಲ್ಲಿ ಖಬರಸ್ತಾನ್ ಎಂದೇ ಇತ್ತು. ಕಳೆದ ಎರಡು ತಿಂಗಳ ಹಿಂದೆ ಅಧಿಕಾರಿಗಳು ಇದನ್ನು ದಾಖಲೆಗಳಲ್ಲಿ ರುದ್ರಭೂಮಿ ಎಂದು ಮಾಡಿದ್ದರಿಂದ ಈ ಗ್ರಾಮದ ಮುಸ್ಲಿಂ ಸಮುದಾಯದ ಜನ ಭಯ ಬಿದ್ದಿದ್ದಾರೆ. ಕಾರಣ, ನಾಳೆ ಯಾರಾದ್ರೂ ಬಂದು ರುದ್ರಭೂಮಿ ಅಂತಾ ಇರುವ ಜಾಗದಲ್ಲಿ ಏಕೆ ಮುಸ್ಲಿಮರ ಅಂತ್ಯಕ್ರಿಯೆ ಮಾಡುತ್ತಿದ್ದೀರಿ? ಎಂದು ತಕರಾರು ತೆಗೆದ್ರೆ ಏನು ಮಾಡಬೇಕು ಎಂಬುದು ಮುಸ್ಲಿಂ ಸಮುದಾಯದವರ ಪ್ರಶ್ನೆಯಾಗಿದೆ.
ಈ ಸಮುದಾಯದ ಜನ ಸುಮಾರು 200 ವರ್ಷಗಳಿಂದ ಇಲ್ಲೇ ಅಂತ್ಯಕ್ರಿಯೆ ಮಾಡುತ್ತ ಬಂದಿದ್ದಾರೆ. ಒಟ್ಟು 5 ಎಕರೆ ಸರ್ಕಾರಿ ಜಮೀನು ಇದಾಗಿದ್ದು, ಅದರಲ್ಲಿ ಮುಸ್ಲಿಂ ಸಮುದಾಯದವರು ಅಂತ್ಯಕ್ರಿಯೆ ಮಾಡುವ 2 ಎಕರೆ ಜಾಗವನ್ನೇ ಸರ್ಕಾರ ರುದ್ರಭೂಮಿ ಎಂದು ಮಾಡಿದೆ. ನಮಗೆ ಖಬರಸ್ತಾನ್ ಎಂದು ದಾಖಲೆಯಲ್ಲಿ ಬರೆದು ಕೊಡಿ, ಪಕ್ಕದ ಜಾಗ ಬೇಕಾದ್ರೆ ರುದ್ರಭೂಮಿ ಎಂದು ದಾಖಲೆಯಲ್ಲಿ ನಮೂದು ಮಾಡಿ ಎಂಬುದು ಇವರ ಒತ್ತಾಯವಾಗಿದೆ. ಅಲ್ಲದೇ ಮುಂದೆ ಈ ಜಾಗದ ವಿವಾದ ಏನಾದ್ರು ಎದ್ದರೆ, ನಾವು ನಮ್ಮ ಸಮಾಜದವರ ಅಂತ್ಯಕ್ರಿಯೆ ಮಾಡಲು ಧಾರವಾಡ ನಗರಕ್ಕೆ ಹೋಗುವ ಪರಿಸ್ಥಿತಿ ಬರುತ್ತದೆ ಎಂಬುದು ಇವರ ಆತಂಕವಾಗಿದೆ.
Kshetra Samachara
27/08/2022 06:08 pm