ಧಾರವಾಡ: ಧಾರವಾಡ ಸಮೀಪದ ನವಲೂರು ಸೇತುವೆಯ ಕರ್ಮಕಾಂಡ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೂ ಗೊತ್ತಾಗಿದೆ.
ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್‌ಟಿಎಸ್ ಮಾರ್ಗದಲ್ಲಿನ ನವಲೂರು ಮೇಲ್ಸೆತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಶಾಸಕ ಅರವಿಂದ ಬೆಲ್ಲದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಬಿಆರ್‌ಎಟಿಎಸ್ ಸಂಸ್ಥೆಯವರು ಅವಳಿನಗರದಲ್ಲಿ ಕೈಕೊಂಡ ಬಹುತೇಕ ಎಲ್ಲ ಕಾಮಗಾರಿಗಳು ಅವೈಜ್ಞಾನಿಕವಾಗಿವೆ. ಸಮೀಪದ ನವಲೂರ ಬಳಿ ನಿರ್ಮಿಸಿರುವ ಸೇತುವೆಯ ತಡೆಗೋಡೆಯ ಕಾಂಕ್ರೀಟ್ ಪ್ಯಾನೆಲ್‌ಗಳು ಕಳಚಿ ಬೀಳುತ್ತಿವೆ. ಇದರಿಂದ ಅವಳಿ ನಗರದ ಮಧ್ಯೆ ಸಂಚರಿಸುವ ಜನರು ಆತಂಕದಲ್ಲಿದ್ದಾರೆ. ಈ ಕುರಿತು ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಈಗಾಗಲೇ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಮಗ್ರ ಮಾಹಿತಿ ನೀಡಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ನಡೆದ ಸಭೆಯಲ್ಲಿ ತಿಳಿಸಿದರೂ ಯಾವುದೇ ಕ್ರಮ ಜರುಗಿಸದಿರುವುದು ವಿಷಾದನೀಯ.
ಸೇತುವೆಯ ಕಳಪೆ ಕಾಮಗಾರಿಯ ಕುರಿತು ತನಿಖೆ ನಡೆಸುವ ಅಗತ್ಯವಿದೆ. ತಪ್ಪಿತಸ್ಥ ಅಧಿಕಾರಿಗಳು, ಎಂಜಿನಿಯರ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮತ್ತು ಸೇತುವೆ ದುರಸ್ತಿ ಕಾರ್ಯವನ್ನು ತ್ವರಿತವಾಗಿ ನಡೆಸಿ ಅನುಕೂಲ ಮಾಡಿಕೊಡಬೇಕು ಎಂದು ಸಿಎಂಗೆ ಶಾಸಕ ಬೆಲ್ಲದ ಒತ್ತಾಯಿಸಿದ್ದಾರೆ.
Kshetra Samachara
25/09/2020 04:32 pm