ಅಳ್ನಾವರ: ಕಳೆದ 15 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಳ್ನಾವರ ತಾಲೂಕಿನ ಕುಂಬಾರಕೊಪ್ಪ ಗ್ರಾಮದಲ್ಲಿ ಮನೆ ಧರೆಗುರುಳಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಮಲ್ಲಿಕಾರ್ಜುನ ಕದಂ ಎಂಬುವವರ ಮನೆ ನೆಲಸಮವಾಗಿದ್ದು, ನೆರೆಮನೆಯವರು ಒತ್ತಾಯಿಸಿದ್ದಕ್ಕೆ ಬೇರೆಯವರ ಮನೆ ಕಟ್ಟೆಯ ಮೇಲೆ ಕಳೆದೆರಡು ದಿನಗಳಿಂದ ವಾಸವಾಗಿದ್ದರಿಂದ ಕುಟುಂಬ ಜೀವಾಪಾಯದಿಂದ ಪಾರಾಗಿದೆ.
ಒಟ್ಟು ನಾಲ್ವರು ಕುಟುಂಬ ಸದಸ್ಯರು ಇದೇ ಮನೆಯಲ್ಲಿ ವಾಸವಿದ್ದರು. ಆದರೆ, ಭಾರಿ ಮಳೆಯಿಂದಾಗಿ ಇದ್ದ ಸೂರು ಕೂಡ ನಾಶಗೊಂಡಿದ್ದು, ಮಲ್ಲಿಕಾರ್ಜುನ ಕದಂ ಅವರ ಕುಟುಂಬ ಬೀದಿ ಪಾಲಾಗಿದೆ!
ನಿನ್ನೆ ದಾಖಲೆಯ 41 ಮಿಲಿ ಮೀಟರ್ ನಷ್ಟು ಮಳೆ ಬಿದ್ದಿದೆ. ಮನೆ ಬಿದ್ದು ಒಂದು ದಿನ ಕಳೆದರೂ ಪಿಡಿಒ ಆಗಲೀ, ತಹಸೀಲ್ದಾರ್ ಆಗಲಿ ಸ್ಥಳಕ್ಕೆ ಆಗಮಿಸದೆ ಇರುವುದು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ. ಸೂರು ಕಳೆದುಕೊಂಡ ಬಡಕುಟುಂಬಕ್ಕೆ ಆದಷ್ಟು ಬೇಗ ಪರಿಹಾರದ ಜೊತೆಗೆ ಸಾಂತ್ವನ- ವಿಶ್ವಾಸದ ಹಿತನುಡಿ ಅವಶ್ಯಕವಾಗಿವೆ.
- ಮಹಾಂತೇಶ ಪಠಾನಿ, ಪಬ್ಲಿಕ್ ನೆಕ್ಸ್ಟ್ ಅಳ್ನಾವರ
Kshetra Samachara
15/07/2022 02:13 pm