ಹುಬ್ಬಳ್ಳಿ: ಅದು ಮಹಾತ್ಮ ಗಾಂಧಿ ಹೆಸರಿನ ನಗರ. ಆ ನಗರದಲ್ಲಿನ ಸಮಸ್ಯೆ ನೋಡಿದರೆ ನಿಜಕ್ಕೂ ಜನರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಬಂದರೇ ಸಾಕು, ಇಲ್ಲಿನ ಜನರ ಜೀವನ ಕಣ್ಣೀರಿನ ಹೊಳೆಯಾಗಿ ಹರಿಯುತ್ತದೆ. ಅಷ್ಟಕ್ಕೂ ಯಾವುದು ಆ ನಗರ!? ಅಲ್ಲಿ ಆಗಿರುವ ಸಮಸ್ಯೆ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ...
ಹೀಗೆ ಎಲ್ಲೆಂದರಲ್ಲಿ ಗಬ್ಬೆದ್ದು ನಾರುತ್ತಿರುವ ಚರಂಡಿ. ಮಳೆ ಬಂದರೇ ಕೆರೆಯಂತಾಗುವ ಮನೆಗಳು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಗಾಂಧಿವಾಡ. ಹೌದು... ವಾರ್ಡ್ ನಂಬರ್ 59ರ ಸಮಸ್ಯೆ ಹೇಳ ತೀರದಾಗಿದೆ. ಪಾಲಿಕೆ ಸದಸ್ಯೆ ಸುವರ್ಣಾ ಕಲಕುಂಟ್ಲ ಪ್ರತಿನಿಧಿಸುವ ಈ ವಾರ್ಡಿನಲ್ಲಿ ಅದೆಷ್ಟೋ ಸಮಸ್ಯೆಗಳನ್ನು ಹೊತ್ತು ಜನರು ಜೀವನ ನಡೆಸುತ್ತಿದ್ದಾರೆ.
ಹಂದಿಗಳ ಹಾವಳಿ ಹೆಚ್ಚಾಗಿದ್ದು, ಜನರು ಸಾಂಕ್ರಾಮಿಕ ರೋಗ ಭೀತಿಯಿಂದ ಬದುಕುತ್ತಿದ್ದಾರೆ. ಅಲ್ಲದೆ, ಕಾರ್ಪೋರೆಟರ್ ಭರವಸೆಯ ಮಾತಿನಿಂದ ಇಲ್ಲಿನ ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ವಿನಃ ಯಾವುದೇ ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಗುತ್ತಿಲ್ಲ! ಜನರು ಮೂಲಭೂತ ಸೌಕರ್ಯಗಳಿಂದಲೇ ವಂಚಿತರಾಗಿದ್ದಾರೆ. ಕುಡಿಯುವ ನೀರಿಗೆ ಚರಂಡಿ ನೀರು ಸೇರ್ಪಡೆಯಾಗುತ್ತಿದ್ದು, ರೋಗದ ಭೀತಿಯಲ್ಲಿಯೇ ಕಲುಷಿತ ನೀರು ಕುಡಿಯುತ್ತಿದ್ದಾರೆ.
ಒಟ್ಟಿನಲ್ಲಿ ಸಮಸ್ಯೆಗಳ ಆಗರವಾಗಿರುವ ಹುಬ್ಬಳ್ಳಿಯ ವಾರ್ಡ್ ನಂ. 59 ಮಹಾನಗರ ಪಾಲಿಕೆಯೇ ತಲೆ ತಗ್ಗಿಸುವಂತಾಗಿದೆ. ಅವ್ಯವಸ್ಥೆಯ ಪರಿಸರದಲ್ಲಿಯೇ ಜೀವಿಸುತ್ತಿರುವ ಜನರ ಕಷ್ಟ ಯಾವಾಗ ಬಗೆಹರಿಯುವುದೋ ಕಾದು ನೋಡಬೇಕಿದೆ.
Kshetra Samachara
06/10/2022 07:36 pm