ಹುಬ್ಬಳ್ಳಿ: ಅದು ದೇಶದ ಮೊದಲ ವಿಮಾ ಸೌಲಭ್ಯಕ್ಕೆ ಒಳಪಟ್ಟ ರಸ್ತೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಕೂಡ ಹೆಸರನ್ನು ಅಚ್ಚೊತ್ತುವ ಮೂಲಕ ರಾಷ್ಟ್ರ ಹಾಗೂ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದ್ದ ರಸ್ತೆ. ಆದರೆ ಈಗ ಆ ರಸ್ತೆಯ ಅವ್ಯವಸ್ಥೆ ನೋಡಿದ್ರೆ ನಿಜಕ್ಕೂ ಬೇಸರ ಆಗುತ್ತೆ. ಹಾಗಿದ್ದರೇ ಯಾವುದು ಆ ರಸ್ತೆ...? ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...
ಇದು ಹುಬ್ಬಳ್ಳಿ ವಿದ್ಯಾನಗರದ ತಿಮ್ಮಸಾಗರ ರಸ್ತೆ. ಹುಬ್ಬಳ್ಳಿಯ ನೂತನ ನ್ಯಾಯಾಲಯ ಸಂಕೀರ್ಣದ ಮುಂಭಾಗದಲ್ಲಿರುವ ಈ ತಿಮ್ಮಸಾಗರ ರಸ್ತೆ ಅಪಘಾತಗಳಿಗೆ ಆಹ್ವಾನ ನೀಡುವಂತಾಗಿದೆ. ಬೈಕ್ ಸವಾರರು ಕೈಯಲ್ಲಿಯೇ ಜೀವ ಹಿಡಿದುಕೊಂಡು ವಾಹನ ಚಾಲನೆ ಮಾಡಬೇಕಿದೆ. ಹೀಗಿದ್ದರೂ ಕೂಡ ಈ ರಸ್ತೆಗೆ ಮಾತ್ರ ಕಾಯಕಲ್ಪ ಸಿಕ್ಕಿಲ್ಲ. ಈ ಹಿಂದೆ ಈ ರಸ್ತೆಗೆ ಸ್ಥಳೀಯ ನಿವಾಸಿಗಳು ವಿಮಾ ಸೌಲಭ್ಯವನ್ನು ಕಲ್ಪಿಸಿದ್ದರೂ ಕೂಡ ಈ ರಸ್ತೆಗೆ ಇದುವರೆಗೂ ದುರಸ್ತಿ ಭಾಗ್ಯ ಬಂದಿಲ್ಲ.
ಈ ಮಾರ್ಗದಲ್ಲಿ ನ್ಯಾಯಾಧೀಶರು, ವಕೀಲರು, ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಾಗಿ ಓಡಾಡುತ್ತಾರೆ. ಈಗಾಗಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ ಮಳೆಗಾಲ ಆರಂಭವಾಗಿದ್ರೂ ಕೂಡ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಕೂಡಲೇ ರಸ್ತೆಯನ್ನು ಸರಿಪಡಿಸಲು ವಕೀಲರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಇಂತಹದೊಂದು ಮಹತ್ವದ ರಸ್ತೆಗೆ ಇದುವರೆಗೂ ಕಾಯಕಲ್ಪ ದೊರೆಯದೇ ಇರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಇನ್ನಾದರೂ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಅಪಘಾತ ಸಂಭವಿಸುವ ಮುನ್ನವೇ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.
Kshetra Samachara
28/06/2022 04:44 pm